ಬಿಹಾರ: ಕಳ್ಳಭಟ್ಟಿ ಸೇವಿಸಿ ನಾಲ್ವರ ಸಾವು,ಐವರು ಪೊಲೀಸರ ಅಮಾನತು
ಪಾಟ್ನಾ,ಅ.28: ಪಾನನಿಷೇಧವು ಕಟ್ಟುನಿಟ್ಟಾಗಿ ಜಾರಿಯಲ್ಲಿರುವ ಬಿಹಾರದ ರೋಹ್ತಾಸ್ ಜಿಲ್ಲೆಯ ಕಛವಾ ಹೊರ ಪೊಲೀಸ್ ಠಾಣಾ ವ್ಯಾಪ್ತಿಯ ದನ್ವರ್ ಗ್ರಾಮದಲ್ಲಿ ವಿಷಪೂರಿತ ಕಳ್ಳಭಟ್ಟಿ ಸೇವನೆಯಿಂದ ನಾಲ್ವರು ಮೃತಪಟ್ಟಿದ್ದಾರೆ. ಇತರ ನಾಲ್ವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಎಲ್ಲ ಎಂಟೂ ಜನರು ಗ್ರಾಮದಲ್ಲಿ ಕಳ್ಳಭಟ್ಟಿ ಸೇವಿಸಿದ್ದು, ತೀವ್ರ ಅಸ್ವಸ್ಥಗೊಂಡ ಬಳಿಕ ತಮ್ಮ ಮನೆಯವರಿಗೆ ತಿಳಿಸಿದ್ದರು. ಇಬ್ಬರು ವೈದ್ಯಕೀಯ ಚಿಕಿತ್ಸೆ ದೊರೆಯುವ ಮುನ್ನವೇ ಸಾವನ್ನಪ್ಪಿದ್ದರೆ, ಇನ್ನಿಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಠಾಣಾಧಿಕಾರಿ ಸೇರಿದಂತೆ ಐವರು ಪೊಲೀಸರನ್ನು ಕರ್ತವ್ಯಚ್ಯುತಿ ಆರೋಪದಲ್ಲಿ ಅಮಾನತುಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅನಿಮೇಷ ಕುಮಾರ ಪರಾಷರ ತಿಳಿಸಿದರು.
Next Story