ಕರುಣಾನಿಧಿ ಭೇಟಿಯಾದ ಪ್ರಧಾನಿ ಮೋದಿ
ಚೆನ್ನೈ, ನ.6: ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಡಿಎಂಕೆ ಮುಖ್ಯಸ್ಥ ಎಂ. ಕರುಣಾನಿಧಿ ಅವರನ್ನು ಗೋಪಾಲಪುರಂನ ನಿವಾಸದಲ್ಲಿ ಭೇಟಿಯಾದರು.
ಸುಮಾರು 15 ನಿಮಿಷಗಳ ಕಾಲ ಮೋದಿ ಅವರು ಕರುಣಾನಿಧಿ ಜೊತೆ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಕರುಣಾನಿಧಿಯನ್ನು ದಿಲ್ಲಿಯ ತಮ್ಮ ನಿವಾಸಕ್ಕೆ ಆಹ್ವಾನಿಸಿದರು ಎಂದು ತಿಳಿದು ಬಂದಿದೆ.
“ ದಿಲ್ಲಿಯ ನನ್ನ ಮನೆಗೆ ಬನ್ನಿ ಅಲ್ಲಿ ವಿಶ್ರಾಂತಿ ಪಡೆಯಿರಿ’’ ಎಂದು ಪ್ರಧಾನಿ ಮೋದಿ ಕರುಣಾನಿಧಿಗೆ ಹೇಳಿದರು ಎಂದು ತಿಳಿದು ಬಂದಿದೆ. ಮೋದಿ ದಿಢೀರನೆ ಕರುಣಾನಿಧಿ ಅವರನ್ನು ಭೇಟಿಯಾಗಿರುವುದು ರಾಜಕೀಯವಾಗಿ ಹೆಚ್ಚಿನ ಮಹತ್ವ ಪಡೆದಿದೆ. ಆದರೆ ಇದೊಂದು ಸೌಹಾರ್ದ ಭೇಟಿ ಎಂದು ಮೂಲಗಳು ತಿಳಿಸಿವೆ.
ಮೋದಿ ಪ್ರಥಮ ಬಾರಿ ಕರುಣಾನಿಧಿ ಮನೆಗೆ ಭೇಟಿ ನೀಡಿದ್ದಾರೆ. ಈ ಸಂದರ್ಭ ಡಿಎಂಕೆ ಕಾರ್ಯಾಧ್ಯಕ್ಷ ಎಂ.ಕೆ .ಸ್ಟಾಲಿನ್, ಕರುಣಾನಿಧಿ ಪತ್ನಿ ದಯಾಳು ಅಮ್ಮಾಲ್, ಮಗಳು ರಾಜ್ಯಸಭಾ ಸದಸ್ಯೆ ಕನಿಮೋಳಿ, ಡಿಎಂಕೆ ನಾಯಕ ದುರೈ ಮುರುಗನ್ ಮತ್ತು ಟಿಕೆಎಸ್ ಎಲನ್ ಗೋವನ್ ಉಪಸ್ಥಿತರಿದ್ದರು.
Next Story