ಲೆ. ಕರ್ನಲ್ ಪುತ್ರಿಯನ್ನು ಅತ್ಯಾಚಾರಗೈದ ಆರೋಪ: ಕರ್ನಲ್ ಬಂಧನ
ಶಿಮ್ಲಾ, ನ.23: ಇಲ್ಲಿನ ಸೇನಾ ಟ್ರೈನಿಂಗ್ ಕಮಾಂಡ್ ಕೇಂದ್ರದಲ್ಲಿ ಕರ್ತವ್ಯದಲ್ಲಿರುವ ಲೆಫ್ಟಿನೆಂಟ್ ಕರ್ನಲ್ ಒಬ್ಬರ ಪುತ್ರಿಯ ಮೇಲೆ ನಡೆದಿದೆಯೆನ್ನಲಾದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸೇನಾ ಕರ್ನಲ್ ಒಬ್ಬರನ್ನು ಬಂಧಿಸಲಾಗಿದೆ.
21 ವರ್ಷದ ಯುವತಿಯ ಮೇಲೆ ಆರೋಪಿಯ ನಿವಾಸದಲ್ಲಿ ಸೋಮವಾರ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಕರ್ನಲ್ ನಿವಾಸದಲ್ಲಿ ಆ ಸಂದರ್ಭ ಹಾಜರಿದ್ದ ಆತನ ಒಬ್ಬ ಸ್ನೇಹಿತ ಕೂಡ ಈ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ. ಆದರೆ ಆತನನ್ನು ಬಂಧಿಸಲಾಗಿಲ್ಲ.
ಘಟನೆ ನಡೆದ ಮರುದಿನ ಸಂತ್ರಸ್ತೆ ದಾಖಲಿಸಿದ ದೂರಿನ ಆಧಾರದಲ್ಲಿ ಎಫ್ಐಆರ್ ದಾಖಲಾಗಿದೆ ಎಂದು ಶಿಮ್ಲಾದ ಎಸ್ಪಿ ಸೌಮ್ಯಾ ಸಾಂಬಸಿವನ್ ಹೇಳಿದ್ದಾರೆ. ಈ ಘಟನೆ ನಡೆಯುವ ಮುಂಚಿನ ದಿನ, ಅಂದರೆ ನವೆಂಬರ್ 19ರಂದು ಆರೋಪಿಯು ಸಂತ್ರಸ್ತೆ ಹಾಗೂ ಆಕೆಯ ತಂದೆಯನ್ನು ಶಿಮ್ಲಾದ ಗೇಯ್ಟಿ ಥಿಯೇಟರಿನಲ್ಲಿ ಕಾರ್ಯಕ್ರಮವೊಂದಕ್ಕೆ ಆಹ್ವಾನಿಸಿದ್ದ. ನಂತರ ಆತ ಅವರನ್ನು ಡಿನ್ನರ್ ಗೆ ಕರೆದುಕೊಂಡು ಹೋಗಿದ್ದು, ಯುವತಿ ಮುಂಬೈಗೆ ತೆರಳಿ ಅಲ್ಲಿ ಮಾಡೆಲಿಂಗ್ ವೃತ್ತಿ ಆಯ್ದುಕೊಳ್ಳಬೇಕೆಂದು ಹಾಗೂ ಅದಕ್ಕಾಗಿ ತನ್ನ(ಆರೋಪಿಯ) ಪುತ್ರಿಯ ಜತೆಗಿರಬೇಕೆಂದೂ ಹೇಳಿದ್ದ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾಳೆ.
ಮರುದಿನ ಯುವತಿಗೆ ಕರೆ ಮಾಡಿ ಆಕೆಯ ಫೋಟೋಗಳನ್ನು ಕಳುಹಿಸಲು ಹೇಳಿದ್ದ. ಅದನ್ನು ವಾಟ್ಸ್ಯಾಪ್ ಮಾಡಿದ ನಂತರ ತನ್ನ ಮನೆಗೆ ಬಂದು ಮಾಡೆಲಿಂಗ್ ಕ್ಷೇತ್ರದ ಕೆಲ ಮಂದಿಯ ಜತೆ ಮಾತನಾಡುವಂತೆ ಹೇಳಿದ್ದ. ಯುವತಿ ಅಲ್ಲಿಗೆ ಹೋದಾಗ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿತ್ತು ಎಂದು ಆರೋಪಿಸಲಾಗಿದೆ. ಘಟನೆಯ ಬಗ್ಗೆ ಯಾರಿಗಾದರೂ ಹೇಳಿದರೆ ತಂದೆಯ ವೃತ್ತಿ ಜೀವನವನ್ನು ಹಾಳು ಮಾಡುವುದಾಗಿಯೂ ಆತ ಬೆದರಿಸಿದ್ದಾನೆಂದು ಸಂತ್ರಸ್ತೆ ದೂರಿದ್ದಾಳೆ.