ಯಾವುದೇ ಕಟ್ ಇಲ್ಲದೆ ಬ್ರಿಟಿಷ್ ಸೆನ್ಸಾರ್ ಮಂಡಳಿಯಲ್ಲಿ ‘ಪದ್ಮಾವತಿ’ ಪಾಸ್
ಮುಂಬೈ, ನ.23: ಬ್ರಿಟಿಷ್ ಸೆನ್ಸಾರ್ ಮಂಡಳಿ (ಬಿಬಿಎಫ್ಸಿ)ಯು ಸಂಜಯ್ ಲೀಲಾ ಬನ್ಸಾಲಿಯ ಪದ್ಮಾವತಿ ಸಿನಿಮಾದ ಒಂದು ದೃಶ್ಯವನ್ನೂ ಕಟ್ ಮಾಡದೆ ಪ್ರಮಾಣ ಪತ್ರ ನೀಡಿದ್ದು ಸಾರ್ವಜನಿಕ ವೀಕ್ಷಣೆಗೆ ಒಪ್ಪಿಗೆ ಸೂಚಿಸಿದೆ. ಆದರೆ ಭಾರತೀಯ ಸೆನ್ಸಾರ್ ಮಂಡಳಿಯಿಂದ ಪ್ರಮಾಣ ಪತ್ರ ಪಡೆಯದ ಹೊರತು ಚಿತ್ರವನ್ನು ಬಿಡುಗಡೆ ಮಾಡುವ ಯಾವ ಇರಾದೆಯೂ ಇಲ್ಲ ಎಂದು ನಿರ್ಮಾಪಕರು ತಿಳಿಸಿದ್ದಾರೆ.
ಬಿಬಿಎಫ್ಸಿಯು ಪದ್ಮಾವತಿ ಚಿತ್ರಕ್ಕೆ 12ಎ ಪ್ರಮಾಣಪತ್ರ ನೀಡಿ ಯುಕೆಯಲ್ಲಿ ಬಿಡುಗಡೆಗೆ ಅನುಮತಿ ನೀಡಿದೆ. 12ಎ ಪ್ರಮಾಣ ಪತ್ರದ ಪ್ರಕಾರ ಈ ಚಿತ್ರವನ್ನು 12ರ ಹರೆಯಕ್ಕಿಂತ ಕಡಿಮೆ ಪ್ರಾಯದ ಮಕ್ಕಳು ಹಿರಿಯ ಜೊತೆಗೆ ಹೊರತು ಒಬ್ಬರೇ ನೋಡುವಂತಿಲ್ಲ. ಈ ಚಿತ್ರದಲ್ಲಿ ಸಾಮಾನ್ಯ ಮಟ್ಟದ ಹಿಂಸಾತ್ಮಕ ದೃಶ್ಯಗಳಿವೆ ಎಂದು ಬಿಬಿಎಫ್ಸಿಯ ಜಾಲತಾಣದಲ್ಲಿ ತಿಳಿಸಲಾಗಿದೆ.
ಇದೇ ವೇಳೆ, ಪದ್ಮಾವತಿ ಸಿನಿಮಾವನ್ನು ಡಿಸೆಂಬರ್ ಒಂದರಂದು ಭಾರತದ ಹೊರಗೂ ಬಿಡುಗಡೆ ಮಾಡದಂತೆ ಸೂಚನೆ ನೀಡಬೇಕು ಎಂದು ಕೋರಿ ಸಲ್ಲಿಸಲಾದ ಅರ್ಜಿಯನ್ನು ನವೆಂಬರ್ 28ರಂದು ಆಲಿಸಲು ಸರ್ವೋಚ್ಛ ನ್ಯಾಯಾಲಯ ಒಪ್ಪಿಕೊಂಡಿದೆ.
ಮುಖ್ಯ ನ್ಯಾಯಾಧೀಶರಾದ ದೀಪಕ್ ಮಿಶ್ರಾ, ನ್ಯಾಯಾಧೀಶರಾದ ಎಎಂ ಖಾನ್ವಿಲ್ಕರ್ ಮತ್ತು ಡಿ ವೈ ಚಂದ್ರಚೂಡ್ ನೇತೃತ್ವದ ಪೀಠವು ಮಂಗಳವಾರದಂದು ಅರ್ಜಿಯ ವಿಚಾರಣೆ ನಡೆಸಲು ಒಪ್ಪಿಕೊಂಡಿದೆ. ಪದ್ಮಾವತಿ ಸಿನಿಮಾದ ನಿರ್ಮಾಪಕರು ಚಿತ್ರದ ಹಾಡುಗಳು ಮತ್ತು ಟ್ರೈಲರ್ಗಳ ಬಿಡುಗಡೆಯ ವಿಷಯದಲ್ಲಿ ಸೆನ್ಸಾರ್ ಮಂಡಳಿಯ ಅನುಮತಿಯ ಬಗ್ಗೆ ನ್ಯಾಯಾಲಯದಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
ಪದ್ಮಾವತಿ ಸಿನಿಮಾ ಡಿಸೆಂಬರ್ ಒಂದರಂದು ಬಿಡುಗಡೆಯಾಗಬೇಕಿದ್ದ ಕಾರಣ ಐವತ್ತಕ್ಕೂ ಅಧಿಕ ದೇಶಗಳಲ್ಲಿ ಸೆನ್ಸಾರ್ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿಸಿರುವ ಚಿತ್ರದ ನಿರ್ಮಾಪಕರಾದ ವಯಾಕಮ್ 18, ಆದರೆ ನಾವು ಭಾರತೀಯ ಸೆನ್ಸಾರ್ ಮಂಡಳಿ ಒಪ್ಪಿಗೆ ನೀಡಿದ ನಂತರವೇ ಜಗತ್ತಿನಾದ್ಯಂತ ಈ ಚಿತ್ರವನ್ನು ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದೆ.