ಮುಸ್ಲಿಂ ವ್ಯಕ್ತಿಗೆ ಹಲ್ಲೆ ನಡೆಸಿ 'ಜೈ ಶ್ರೀರಾಮ್' ಹೇಳುವಂತೆ ಬಲವಂತಪಡಿಸಿದ ದುಷ್ಕರ್ಮಿ
ವೀಡಿಯೋ ವೈರಲ್
ಜೈಪುರ್,ಫೆ.7:ಯುವಕನೊಬ್ಬ 45 ವರ್ಷದ ಮುಸ್ಲಿಂ ವ್ಯಕ್ತಿಯೊಬ್ಬನ ಕೆನ್ನೆಗೆ ಬಾರಿಸುತ್ತಾ ‘ಜೈ ಶ್ರೀ ರಾಮ್' ಹೇಳುವಂತೆ ಆತನನ್ನು ಬಲವಂತ ಪಡಿಸುತ್ತಿರುವ ಘಟನೆಯ ವೀಡಿಯೋವೊಂದು ವೈರಲ್ ಆಗಿದೆ. ಘಟನೆ ಸಿರೋಹಿ ಜಿಲ್ಲೆಯಲ್ಲಿ ನಡೆದಿದೆಯೆನ್ನಲಾಗಿದ್ದು ಇದರ ವಿರುದ್ಧ ಮುಸ್ಲಿಂ ಸಮುದಾಯ ಪ್ರತಿಭಟನೆಕ್ಕಿಳಿದಿದೆ. ಈ ವೀಡಿಯೋವನ್ನು ಆರೋಪಿ ವಿನಯ್ ಮೀನಾ (18) ಎಂಬವನೇ ಅಪ್ಲೋಡ್ ಮಾಡಿದ್ದಾನೆನ್ನಲಾಗಿದೆ.
ಮೂರು ನಿಮಿಷ ಅವಧಿಯ ಈ ವೀಡಿಯೋದಲ್ಲಿ ಈ ಯುವಕ ಮುಹಮ್ಮದ್ ಸಲೀಂ ಎಂಬ ವ್ಯಕ್ತಿಗೆ 25 ಬಾರಿ ಕಪಾಳ ಮೋಕ್ಷ ಮಾಡಿರುವುದು ಕಾಣಿಸುತ್ತದೆ. ಆತ ಜೈ ಶ್ರೀ ರಾಮ್ ಎಂದು ಹೇಳುವಂತೆ ಒತ್ತಾಯಿಸುತ್ತಿದ್ದಾಗ ಆ ವ್ಯಕ್ತಿ ಮಾತ್ರ ದೇವರು ಎಲ್ಲರಿಗಿಂತ ದೊಡ್ಡವನು ಎಂದು ಹೇಳುತ್ತಿರುವುದು ಕೇಳಿಸುತ್ತದೆ. ದುಷ್ಕರ್ಮಿಯ ವಿರುದ್ಧ ಅಬು ರೋಡ್ ಸಿಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.
ಆರೋಪಿ ಯುವಕನನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಇನ್ನೊಬ್ಬರ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ, ಶಾಂತಿ ಭಂಗ ಮಾಡಿದ ಪ್ರಕರಣ ಆತನ ವಿರುದ್ಧ ದಾಖಲಿಸಲಾಗಿದೆ.