ನಾಳೆಯಿಂದ ಸಿಬಿಎಸ್ಇ 10, 12ನೇ ತರಗತಿ ಪರೀಕ್ಷೆ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ, ಮಾ.4: ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ ಆಯೋಜಿಸುವ 10 ಮತ್ತು 12ನೇ ತರಗತಿ ಪರೀಕ್ಷೆಯು ಮಾ.5ರಿಂದ ಆರಂಭವಾಗುತ್ತಿದ್ದು 28 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
10ನೇ ತರಗತಿಯಲ್ಲಿ 16,38,428 ವಿದ್ಯಾರ್ಥಿಗಳು ಪರೀಕ್ಷೆಯನ್ನು ಎದುರಿಸುತ್ತಿದ್ದರೆ 12ನೇ ತರಗತಿಯ 11,86,306 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಮಂಡಳಿಯು ತನ್ನ ಪ್ರಕಟನೆಯಲ್ಲಿ ತಿಳಿಸಿದೆ. ಈ ಹಿಂದೆ ಅನುಷ್ಠಾನಗೊಳಿಸಲಾಗಿದ್ದ ಸಮಗ್ರ ಮತ್ತು ನಿರಂತರ ಮೌಲ್ಯಮಾಪನ (ಸಿಸಿಇ) ಕ್ರಮವನ್ನು ಸರಕಾರವು ಕೈಬಿಟ್ಟಿರುವ ಕಾರಣ ಈ ವರ್ಷ ಮತ್ತೆ 10ನೇ ತರಗತಿಗೆ ಮಂಡಳಿ ಪರೀಕ್ಷೆಯನ್ನು ಪುನರ್ಪರಿಚಯಿಸಲಾಗಿದೆ.
ದೇಶಾದ್ಯಂತ 4,453 ಕೇಂದ್ರಗಳಲ್ಲಿ ಪರೀಕ್ಷೆಯನ್ನು ಆಯೋಜಿಸಲಾಗಿದ್ದರೆ ಭಾರತದಿಂದ ಹೊರಗೆ 78 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಇದೇ ರೀತಿ, 12ನೇ ತರಗತಿಗೆ ಭಾರತದಲ್ಲಿ 4,138 ಕೇಂದ್ರಗಳಲ್ಲಿ ಮತ್ತು ಭಾರತದಿಂದ ಹೊರಗೆ 71 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.
ಮಧುಮೇಹದಿಂದ ಬಳಲುವ ವಿದ್ಯಾರ್ಥಿಗಳು ಪರೀಕ್ಷಾ ಕೊಠಡಿಗೆ ತಿನಿಸುಗಳನ್ನು ಕೊಂಡೊಯ್ಯಲು ಅವಕಾಶ ನೀಡಲಾಗಿದೆ. ಈ ವರ್ಷದಿಂದ ವಿಶೇಷ ಅಗತ್ಯದ ವಿದ್ಯಾರ್ಥಿಗಳು ಲ್ಯಾಪ್ಟಾಪ್ ಬಳಸಿ ಪರೀಕ್ಷೆ ಬರೆಯಲು ಮಂಡಳಿ ಅನುಮತಿ ನೀಡಿದೆ. ಆದರೆ ಅವರ ಲ್ಯಾಪ್ಟಾಪ್ಗಳನ್ನು ಪರಿಶೀಲನೆಗೊಳಪಡಿಸಲಾಗುವುದು ಮತ್ತು ಯಾವುದೇ ಅಂತರ್ಜಾಲ ಸಂಪರ್ಕ ಹೊಂದುವಂತಿಲ್ಲ. 10 ಮತ್ತು 12ನೇ ತರಗತಿಯ ಕ್ರಮವಾಗಿ 4,510 ಮತ್ತು 2,846 ವಿಶೇಷ ಅಗತ್ಯದ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಎಂದು ಮಂಡಳಿ ಪ್ರಕಟನೆಯಲ್ಲಿ ತಿಳಿಸಿದೆ