ಗುಜರಾತ್ ಅಸೆಂಬ್ಲಿ ಸ್ಪೀಕರ್ ಆಸನದಲ್ಲಿ ಕುಳಿತ ಯುವಕ!: ಫೊಟೊ ವೈರಲ್
ತನಿಖೆಗೆ ಆದೇಶ
ಗುಜರಾತ್, ಎ.4: ಗುಜರಾತ್ ಅಸೆಂಬ್ಲಿ ಸ್ಪೀಕರ್ ಆಸನದಲ್ಲಿ ಯುವಕನೊಬ್ಬ ಕುಳಿತುಕೊಂಡಿರುವ ಫೋಟೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ತನಿಖೆ ನಡೆಸಲು ಸ್ಪೀಕರ್ ರಾಜೇಂದ್ರ ತ್ರಿವಾದಿ ಹೇಳಿದ್ದಾರೆ.
“ಸ್ಪೀಕರ್ ಹೊರತುಪಡಿಸಿ ಬೇರೆ ಯಾರೂ ಆ ಆಸನದಲ್ಲಿ ಕುಳಿತುಕೊಳ್ಳಬಾರದು. ಶಾಸಕರು ಹಾಗು ಅಧಿಕೃತ ವ್ಯಕ್ತಿಗಳು ಮಾತ್ರ ಮುಖ್ಯ ಹಾಲ್ ಗೆ ಪ್ರವೇಶಿಸಲು ಅವಕಾಶವಿರುವುದರಿಂದ ಇದು ಭದ್ರತಾ ಲೋಪವಾಗಿದೆ. ಸ್ಪೀಕರ್ ಈ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ” ಎಂದು ಅಸೆಂಬ್ಲಿ ಕಾರ್ಯದರ್ಶಿ ಡಿ.ಎಂ. ಪಟೇಲ್ ಹೇಳಿದ್ದಾರೆ.
“ಮೊದಲು ಸ್ಪೀಕರ್ ಗೆ ವರದಿ ಸಲ್ಲಿಸಲಾಗುವುದು. ನಂತರ ಅವರ ಆದೇಶದಂತೆ ಕ್ರಮ ಕೈಗೊಳ್ಳಲಾಗುವುದು” ಎಂದು ಅವರು ತಿಳಿಸಿದ್ದಾರೆ. ಸ್ಪೀಕರ್ ಆಸನದಲ್ಲಿ ಕುಳಿತ ವ್ಯಕ್ತಿಯನ್ನು ಗುರುತಿಸಲಾಗಿದೆ ಎಂದವರು ಮಾಹಿತಿ ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಫೋಟೊದಲ್ಲಿರುವ ಯುವಕನನ್ನು ರಾಹುಲ್ ಎಂದು ಗುರುತಿಸಲಾಗಿದೆ. ಅಧಿವೇಶನ ನಡೆಯದೇ ಇದ್ದಾಗ ಈತ ಇನ್ನೊಬ್ಬನೊಂದಿಗೆ ಹಾಲ್ ಪ್ರವೇಶಿಸಿದ್ದ ಎಂದು ತಿಳಿದುಬಂದಿದೆ.