ಶಬರಿಮಲೆಯಿಂದ ಮರಳುತ್ತಿದ್ದ ಬಾಲಕಿಯ ಅತ್ಯಾಚಾರಗೈದ 60 ವರ್ಷದ ವ್ಯಕ್ತಿ
ವಡಶ್ಶೇರಿಕ್ಕಡ, ಎ.23: ಶಬರಿಮಲೆ ದರ್ಶನ ಪಡೆದು ಮರಳುತ್ತಿದ್ದ ಒಂಬತ್ತು ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿದ 60 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ 17ನೆ ತಾರೀಕಿನಂದು ಪಂಪೆ ಮತ್ತು ವಡಶ್ಶೇರಿಕ್ಕರದ ಮಧ್ಯೆ ಘಟನೆ ನಡೆದಿತ್ತು. ಬಾಲಕಿಯ ಹೆತ್ತವರು ನೀಡಿದ ದೂರಿನ ಆಧಾರದಲ್ಲಿ ಆರೋಪಿಯ ವಿರುದ್ಧ ಕೇಸು ದಾಖಲಿಸಿ ಬಂಧಿಸಲಾಗಿದೆ.
ಆರೋಪಿ ರಾಜನ್ ನಿವೃತ್ತ ಬಿಎಸ್ಸೆನ್ನೆಲ್ ಅಧಿಕಾರಿಯಾಗಿದ್ದು, ಆತನನ್ನು ಪಂಪೆ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ ಪೆಕ್ಟರ್ ನೇತೃತ್ವದ ತನಿಖಾ ತಂಡ ಬಂಧಿಸಿದೆ. ಶಬರಿಮಲೆಯಿಂದ ಹಿಂದಿರುಗುತ್ತಿದ್ದ ವೇಳೆ ಬಾಲಕಿಯ ಅತ್ಯಾಚಾರಗೈಯಲಾಗಿದೆ. ಬಾಲಕಿ ಸಹಿತ ಇಬ್ಬರು ಹೆಣ್ಣುಮಕ್ಕಳು ಹಾಗೂ ಇಬ್ಬರು ಗಂಡು ಮಕ್ಕಳು ಶಬರಿಮಲೆ ಯಾತ್ರೆಗೆ ಹೋಗಿ ಮರಳುತ್ತಿದ್ದರು.
ಈ ತಂಡದ ಗುರುಸ್ವಾಮಿಯಾಗಿದ್ದ ರಾಜನ್ ಯಾತ್ರಾ ತಂಡದಲ್ಲಿದ್ದ ಇತರ ಮಕ್ಕಳೆಲ್ಲ ವಾಹನದಿಂದ ಇಳಿದು ಹೋದ ಬಳಿಕ ವಾಹನದಲ್ಲಿ ಒಬ್ಬಳೇ ಉಳಿದಿದ್ದ ಬಾಲಕಿಯನ್ನು ಚಲಿಸುತ್ತಿದ್ದ ವಾಹನದಲ್ಲಿಯೇ ಅತ್ಯಾಚಾರ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಶಬರಿಮಲೆಗೆ ಹೋಗಿ ಮನೆಗೆ ಮರಳಿ ಬಂದ ನಂತರ ಬಾಲಕಿ ಖಿನ್ನತೆಯಿಂದ ವರ್ತಿಸತೊಡಗಿದ್ದಳು. ಇದನ್ನು ಗಮನಿಸಿದ ಮನೆಯವರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆಸ್ಪತ್ರೆಯಲ್ಲಿ ಕೌನ್ಸಲಿಂಗ್ನ ವೇಳೆ ಬಾಲಕಿ ನಡೆದಿರುವ ಘಟನೆಯ ಬಗ್ಗೆ ವಿವರಿಸಿದ್ದಾಳೆ ಎನ್ನಲಾಗಿದೆ.