ಜಯಲಲಿತಾರ ಯಾವುದೇ ಜೈವಿಕ ಮಾದರಿ ತನ್ನ ಬಳಿ ಇಲ್ಲ ಎಂದ ಅಪೋಲೋ ಆಸ್ಪತ್ರೆ
ಚೆನ್ನೈ, ಎ.26: ತನ್ನ ಬಳಿ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಯಾವುದೇ ಜೈವಿಕ ಮಾದರಿಗಳು ಇಲ್ಲ ಎಂದು ಅಪೋಲೋ ಆಸ್ಪತ್ರೆಯ ಆಡಳಿತ ಮದ್ರಾಸ್ ಹೈಕೋರ್ಟಿಗೆ ಹೇಳಿದೆ.
ಬೆಂಗಳೂರು ಮೂಲದ ಅಮೃತಾ ಎಂಬವರು ತಾವು ಜಯಲಲಿತಾ ಅವರ ಪುತ್ರಿ ಎಂದು ಹೇಳಿಕೊಂಡು ಸಲ್ಲಿಸಿದ ಅಪೀಲಿನ ಮೇಲಿನ ವಿಚಾರಣೆ ಸಂದರ್ಭ ಜಸ್ಟಿಸ್ ಎಸ್ ವೈದ್ಯನಾಥನ್ ಅವರು ಆಸ್ಪತ್ರೆ ಆಡಳಿತದಿಂದ ಮೇಲಿನ ಮಾಹಿತಿ ಕೋರಿದ್ದರು. ತನ್ನ ಡಿಎನ್ಎ ಪರೀಕ್ಷೆಗೆ ಆದೇಶಿಸಿ ತನ್ನ ವಾದವನ್ನು ಪುಷ್ಠೀಕರಿಸಲು ಸಹಾಯ ಮಾಡುವಂತೆಯೂ ಅಮೃತಾ ಕೋರಿದ್ದರು.
ವಿಚಾರಣೆಯ ಆರಂಭಿಕ ಹಂತದಲ್ಲಿ ಅಮೃತಾ ವಾದವನ್ನು ವಿರೋಧಿಸಿದ್ದ ಜಯಲಲಿತಾ ಸೋದರಳಿಯ ದೀಪಕ್ ಹಾಗೂ ಸೋದರ ಸೊಸೆ ದೀಪಾ, ಅರ್ಜಿದಾರೆ ತನ್ನ ವಾದ ಪುಷ್ಠೀಕರಿಸಲು ಯಾವುದೇ ಸಾಕ್ಷಿ ಒದಗಿಸದೇ ಇರುವುದರಿಂದ ಆಕೆ ಸಿವಿಲ್ ನ್ಯಾಯಾಲಯದ ಮೊರೆ ಹೋಗಬೇಕೆಂದು ಹೇಳಿದ್ದರು.
ರಾಜ್ಯ ಸರಕಾರ ಕೂಡ ಅಫಿದಾವಿತ್ ಸಲ್ಲಿಸಿ ಆಕೆ ಹೇಳಿದಂತೆ ಆಕೆ ಜಯಲಲಿತಾರನ್ನು ಪೋಸ್ ಗಾರ್ಡನ್ ನಿವಾಸದಲ್ಲಿ ಅಥವಾ ಜಯಲಲಿತಾ ತಮ್ಮ ಬೆಂಗಳೂರು ಭೇಟಿ ವೇಳೆ ಆಕೆಯನ್ನು ಭೇಟಿಯಾಗಿದ್ದರೆಂಬುದನ್ನು ಪುಷ್ಠೀಕರಿಸಲು ತನ್ನ ಬಳಿ ಯಾವುದೇ ಸಾಕ್ಷ್ಯವಿಲ್ಲವೆಂದು ಹೇಳಿತ್ತು. ಪ್ರಕರಣದ ಮುಂದಿನ ವಿಚಾರಣೆ ಜೂನ್ 4ಕ್ಕೆ ನಿಗದಿಯಾಗಿದೆ.