ಭವಿಷ್ಯನಿಧಿ ಪೋರ್ಟಲ್ ಹ್ಯಾಕ್: 2.7 ಕೋಟಿ ನೌಕರರ ಡಾಟಾ ಕಳವು ಭೀತಿ
ಹೊಸದಿಲ್ಲಿ,ಮೇ 2: ನೌಕರರ ಭವಿಷ್ಯನಿಧಿ ಸಂಸ್ಥೆ(ಇಪಿಎಫ್ಒ)ಯ ವೆಬ್ಸೈಟ್ಗೆ ಕನ್ನ ಹಾಕಲಾಗಿದ್ದು,ಸಂಸ್ಥೆಯಲ್ಲಿ ನೋಂದಣಿಯನ್ನು ಹೊಂದಿರುವ ಸುಮಾರು 2.7 ಕೋಟಿ ಉದ್ಯೋಗಿಗಳ ವೈಯಕ್ತಿಕ ಮತ್ತು ವೃತ್ತಿ ಸಂಬಂಧಿತ ವಿವರಗಳು ದತ್ತಾಂಶ ಕಳುವಿನ ಅಪಾಯವನ್ನು ಎದುರಿಸುತ್ತಿವೆ.
ಹ್ಯಾಕರ್ಗಳು ಆಧಾರ್ ಜೋಡಣೆಯ ಇಪಿಎಫ್ಒ ಪೋರ್ಟಲ್ ನಿಂದ ದತ್ತಾಂಶಗಳ ಕಳವು ಮಾಡಿದ್ದಾರೆ ಎಂದು ಕೇಂದ್ರ ಭವಿಷ್ಯನಿಧಿ ಆಯುಕ್ತರು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ. ಹ್ಯಾಕರ್ಗಳ ಕೈಚಳಕಕ್ಕೆ ಗುರಿಯಾಗಿರುವ ‘ಆಧಾರ್ ಡಾಟ್ ಇಪಿಎಫ್ಒಸರ್ವಿಸಿಸ್ ಡಾಟ್ ಕಾಮ್’ ಅನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಈ ಹ್ಯಾಕರ್ಗಳು ಕನ್ನ ಹಾಕಲು ಅವಕಾಶ ನೀಡಿರುವ ಪೋರ್ಟಲ್ನಲ್ಲಿಯ ಲೋಪಗಳನ್ನು ನಿವಾರಿಸುವಂತೆ ಸಚಿವಾಲಯದ ತಾಂತ್ರಿಕ ತಂಡವನ್ನೂ ಅವರು ಕೋರಿದ್ದಾರೆ. ಈ ಪೋರ್ಟಲ್ ಉದ್ಯೋಗಿಗಳ ಆಧಾರ್ ಸಂಖ್ಯೆಗಳನ್ನು ಅವರ ಭವಿಷ್ಯನಿಧಿ ಖಾತೆಗಳೊಂದಿಗೆ ಜೋಡಿಸುತ್ತದೆ.
ಎಇಪಿಎಫ್ಒದ ಸದ್ರಿ ವೆಬ್ಸೈಟ್ನಲ್ಲಿರುವ ಲೋಪಗಳನ್ನು ಹ್ಯಾಕರ್ಗಳು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಗುಪ್ತಚರ ಘಟಕ(ಐಬಿ)ವು ಮಾಹಿತಿ ನೀಡಿತ್ತೆಂದು ‘ಗೌಪ್ಯ’ಎಂದು ಗುರುತು ಮಾಡಲಾಗಿರುವ ಪತ್ರದಲ್ಲಿ ಆಯುಕ್ತರು ತಿಳಿಸಿದ್ದಾರೆ.
ಯಾವ ಪ್ರಮಾಣದಲ್ಲಿ ದತ್ತಾಂಶಗಳ ಉಲ್ಲಂಘನೆ ನಡೆದಿದೆ ಎನ್ನುವುದು ಗೊತ್ತಾಗಿಲ್ಲವಾದರೂ,ಭವಿಷ್ಯನಿಧಿ ಚಂದಾದಾರರ ಹೆಸರು ಮತ್ತು ವಿಳಾಸ,ಜೊತೆಗೆ ಅವರ ಉದ್ಯೋಗ ಇತಿಹಾಸದ ವಿವರಗಳನ್ನು ಈ ವೆಬ್ಸೈಟ್ ಒಳಗೊಂಡಿದೆ.
ಪ್ರತಿ ಸದಸ್ಯ ತನ್ನ ವೇತನದ ಶೇ.12ರಷ್ಟನ್ನು ಭವಿಷ್ಯನಿಧಿಗೆ ವಂತಿಗೆಯಾಗಿ ಸಲ್ಲಿಸುತ್ತಾನೆ,ಹೀಗಾಗಿ ವೇತನದ ವಿವರಗಳು ಕಳ್ಳತನವಾಗಿರಬಹುದು. ಜೊತೆಗೆ ಅವರ ಬ್ಯಾಂಕ್ ಖಾತೆ ಸಂಖ್ಯೆಗಳೂ ಸೇರಿರಬಹುದು ಎಂದು ಸೈಬರ್ ಭದ್ರತೆ ತಜ್ಞ ಆನಂದ ವೆಂಕಟನಾರಾಯಣ ಹೇಳಿದ್ದಾರೆ.
ಎಪ್ರಿಲ್ 2017 ಮತ್ತು ಜನವರಿ 2018ರ ನಡುವೆ ಒಟ್ಟು 114 ಸರಕಾರಿ ವೆಬ್ಸೈಟ್ಗಳಿಗೆ ಕನ್ನ ಹಾಕಲಾಗಿತ್ತು ಎಂದು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಕಳೆದ ಮಾರ್ಚ್ನಲ್ಲಿ ಲೋಕಸಭೆಯಲ್ಲಿ ತಿಳಿಸಿತ್ತು.
ಸರಕರಿ ವೆಬ್ಸೈಟ್ಗಳ ಸುರಕ್ಷತೆಯ ಬಗ್ಗೆ ನಿಗಾ ಇರಿಸುವದು ದೊಡ್ಡ ಸಮಸ್ಯೆಯಾಗಿದೆ ಎಂದು ಸೈಬರ್ ಭದ್ರತೆ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದತ್ತಾಂಶಗಳ ಸೋರಿಕೆಯಾಗಿರುವುದು ಈವರೆಗೆ ಖಚಿತಗೊಂಡಿಲ್ಲ. ಸರ್ವರ್ ಮತ್ತು ಸಿಎಸ್ಸಿ(ಸಾಮಾನ್ಯ ಸೇವಾ ಕೇಂದ್ರ)ಮೂಲಕ ಹೋಸ್ಟ್ ಸರ್ವಿಸ್ನ್ನು ಸ್ಥಗಿತಗೊಳಿಸುವ ಮೂಲಕ ತಾನು ಮುಂಜಾಗ್ರತಾ ಕ್ರಮವನ್ನು ಕೈಗೊಂಡಿದ್ದೇನೆ ಎಂದು ಇಪಿಎಫ್ಒ ಹೇಳಿಕೆಯಲ್ಲಿ ತಿಳಿಸಿದೆ.
ತನ್ಮಧ್ಯೆ ಭವಿಷ್ಯನಿಧಿ ಸಂಸ್ಥೆಯ ಪೋರ್ಟ್ಲ್ನಲ್ಲಿ ದತ್ತಾಂಶಗಳ ಉಲ್ಲಂಘನೆಗೂ ತನಗೂ ಯಾವುದೇ ಸಂಬಂಧವಿಲ್ಲ. ತನ್ನ ಸರ್ವರ್ ನಲ್ಲಿಯ ಮಾಹಿತಿಗಳು ಸುರಕ್ಷಿತವಾಗಿವೆ ಎಂದು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ(ಯುಐಡಿಎಐ)ವು ಸ್ಪಷ್ಟಪಡಿಸಿದೆ.