ಬಿಜೆಪಿ ಮುಖಂಡನ ವಿರುದ್ಧ ಮಹಿಳೆಯಿಂದ ಅತ್ಯಾಚಾರ ಆರೋಪ: ಪತ್ರಿಕಾಗೋಷ್ಟಿಯಲ್ಲೇ ತಲೆಬೋಳಿಸಿಕೊಂಡ ಮಹಿಳೆ
ಲಕ್ನೊ, ಮೇ.7: ಉನ್ನಾವೊದಲ್ಲಿ ನಡೆದ ಘಟನೆಯು ಜನಮಾನಸದಿಂದ ಮಾಸುವ ಮುನ್ನವೇ ಮತ್ತೊಬ್ಬ ಬಿಜೆಪಿ ಮುಖಂಡನ ವಿರುದ್ಧ ಅತ್ಯಾಚಾರ ಮತ್ತು ಬ್ಲಾಕ್ಮೇಲ್ ಆರೋಪ ಕೇಳಿಬಂದಿದೆ. ಉತ್ತರ ಪ್ರದೇಶದ ಲಕ್ನೊ ಮೂಲದ ವಕೀಲೆಯೊಬ್ಬರು ತನ್ನ ಹಿರಿಯ ಸಹಪಾಠಿ ಹಾಗೂ ಬಿಜೆಪಿ ನಾಯಕ ಸತೀಶ್ ಶರ್ಮಾ ಮೂರು ವರ್ಷಗಳ ಕಾಲ ತನ್ನನ್ನು ಅತ್ಯಾಚಾರ ನಡೆಸಿದ್ದಾರೆ ಮತ್ತು ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ತನ್ನ ಅಶ್ಲೀಲ ವೀಡಿಯೊವನ್ನು ಚಿತ್ರೀಕರಿಸಿರುವ ಶರ್ಮಾ ಅದನ್ನು ಅಸ್ತ್ರವಾಗಿ ಬಳಸಿಕೊಂಡು ತನ್ನನ್ನು ಬ್ಲಾಕ್ಮೇಲ್ ಮಾಡುತ್ತಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.
ಈ ಬಗ್ಗೆ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಆಕೆ ಪತ್ರಕರ್ತರ ಎದುರೇ ತನ್ನ ತಲೆಯನ್ನು ಬೋಳಿಸಿಕೊಂಡಿದ್ದಾರೆ. ಜೊತೆಗೆ ಪೊಲೀಸರು ತನ್ನ ದೂರನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ ಎಂದು ಆರೋಪಿಸಿದ್ದಾರೆ. ದೂರು ದಾಖಲಿಸಿದ ನಂತರವೂ ಪೊಲೀಸರು ಶರ್ಮಾ ವಿರುದ್ಧ ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎಂದು ಅವರು ತಿಳಿಸಿದ್ದಾರೆ. ಸೋಮವಾರ ಸಂಜೆಯ ಒಳಗಾಗಿ ಶರ್ಮಾ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ಹೋದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸಂತ್ರಸ್ತ ಮಹಿಳೆ ಬೆದರಿಕೆ ಹಾಕಿದ್ದಾರೆ. “ಆತ ಬಿಜೆಪಿಯ ಓರ್ವ ಪ್ರಮುಖ ನಾಯಕನಾಗಿದ್ದಾನೆ. ಹಾಗಾಗಿ ಆತನ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಲಾಗುತ್ತಿಲ್ಲ. ನಾನು ದಲಿತೆ ಎಂಬ ಕಾರಣಕ್ಕೆ ನನಗೆ ಇಷ್ಟೆಲ್ಲ ಕಷ್ಟಗಳನ್ನು ನೀಡಲಾಗುತ್ತಿದೆ. ಆತ ನನ್ನ ಕುಟುಂಬಸ್ಥರಿಗೂ ಬೆದರಿಕೆ ಹಾಕಿದ್ದಾನೆ.. ಇದರಿಂದ ನನಗೆ ಬಹಳ ಭಯವಾಗಿದೆ” ಎಂದು ಮಹಿಳೆ ತಿಳಿಸಿದ್ದಾರೆ. ಕಳೆದ ತಿಂಗಳು ಬಿಜೆಪಿಯ ಉನ್ನಾವೊ ಶಾಸಕ ಕುಲ್ದೀಪ್ ಸಿಂಗ್ ಸೆಂಗರ್ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರ ಆರೋಪ ಹೊರಿಸಿದ್ದರು. ಈ ಪ್ರಕರಣದ ತನಿಖೆಯನ್ನು ಸಿಬಿ ನಡೆಸುತ್ತಿದ್ದು ಸೆಂಗರ್ ಸದ್ಯ ಉನ್ನಾವೊ ಜೈಲಿನಲ್ಲಿದ್ದಾರೆ.