2 ವರ್ಷಗಳ ಹಿಂದೆ ಅಪಹೃತನಾದ ಬಾಲಕನ ಅಸ್ಥಿಪಂಜರ ಪತ್ತೆ
ಹೊಸದಿಲ್ಲಿ, ಜೂ. 4: ಸುಮಾರು ಎರಡು ವರ್ಷಗಳ ಹಿಂದೆ ಅಪಹರಣಕ್ಕೊಳಗಾದ ನಾಲ್ಕು ವರ್ಷದ ಬಾಲಕನ ಅಸ್ಥಿಪಂಜರ ದಿಲ್ಲಿ ಸಮೀಪದ ಸಾಹಿಬಾಬಾದ್ನ ಆತನ ಮನೆಯ ಸಮೀಪದ ಮನೆಯ ಟೆರೇಸ್ನಲ್ಲಿರಿಸಲಾದ ಮರದ ಪೆಟ್ಟಿಗೆಯಲ್ಲಿ ಪತ್ತೆಯಾಗಿದೆ. ಬಾಲಕ ಮುಹಮ್ಮದ್ ಝೈದ್ 2016 ಡಿಸೆಂಬರ್ 1ರಂದು ನಾಪತ್ತೆಯಾಗಿದ್ದ.
ಆ ಪ್ರದೇಶದ ಮಕ್ಕಳು ಮನೆಯ ಸಮೀಪದ ಗರಿಮಾ ಉದ್ಯಾನವನದಲ್ಲಿ ಕ್ರಿಕೆಟ್ ಆಡುತ್ತಿದ್ದಾಗ ಬಾಲ್ ಮನೆಯೊಂದರ ಟೆರೇಸ್ ಮೇಲೆ ಬಿತ್ತು. ಟೆರೇಸ್ನಲ್ಲಿ ಬಾಲ್ ಹುಡುಕುತ್ತಿದ್ದಾಗ ಮರದ ಪೆಟ್ಟಿಗೆಯಲ್ಲಿ ಅಸ್ಥಿಪಂಜರ ಪತ್ತೆಯಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ತಾವು ಅಸ್ಥಿಪಂಜರ ನೋಡಿರುವ ಬಗ್ಗೆ ಮಕ್ಕಳು ಅಲ್ಲಿನ ನಿವಾಸಿಗಳಿಗೆ ತಿಳಿಸಿದರು. ಝೈದ್ ನ ತಂದೆ ಕೂಡಲೇ ಅಲ್ಲಿಗೆ ತಲುಪಿ ಶಾಲೆ ಸಮವಸ್ತ್ರ ಹಾಗೂ ಬಟ್ಟೆ ತನ್ನ ಪುತ್ರನದ್ದೇ ಎಂದು ಗುರುತಿಸಿದರು ಎಂದು ಅವರು ತಿಳಿಸಿದ್ದಾರೆ ಮೂಳೆಗಳನ್ನು ಮರಣೋತ್ತರ ಹಾಗೂ ಡಿಎನ್ಎ ಪರೀಕ್ಷೆಗಾಗಿ ಕಳುಹಿಸಿ ಕೊಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ
Next Story