ಲೈಂಗಿಕ ಕಿರುಕುಳ: ಸಾಯ್ ಕೋಚ್ಗೆ ಗೇಟ್ಪಾಸ್
ಹೊಸದಿಲ್ಲಿ, ಜೂ.6: ಭಾರತೀಯ ಕ್ರೀಡಾ ಪ್ರಾಧಿಕಾರ(ಸಾಯ್)ದ ಪ್ರಾದೇಶಿಕ ಕೇಂದ್ರಗಳಲ್ಲಿ ಕ್ರೀಡಾಪಟುಗಳಿಗೆ ಲೈಂಗಿಕ ಕಿರುಕುಳ ನೀಡಲಾಗುತ್ತಿದೆ ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದ ಬೆನ್ನಲ್ಲೇ, ತರಬೇತುದಾರರೊಬ್ಬರನ್ನು ಪ್ರಾಧಿಕಾರವು ವಜಾ ಮಾಡಿದೆ. ಜತೆಗೆ ಒಬ್ಬ ಸಿಬ್ಬಂದಿಗೆ ಕಡ್ಡಾಯ ನಿವೃತ್ತಿ ಪಡೆಯುವಂತೆ ಆದೇಶಿಸಿದ್ದು, ಮತ್ತೊಬ್ಬ ತರಬೇತುದಾರರ ವಿರುದ್ಧ ತನಿಖೆಗೆ ಆದೇಶಿಸಿದೆ.
ವಜಾಗೊಂಡ ಕೋಚ್ ಪ್ರಾಧಿಕಾರದ ತಮಿಳುನಾಡು ಕೇಂದ್ರದವರು. ಸುಮಾರು 15 ಕಿರಿಯ ಅಥ್ಲೀಟ್ಗಳು ಹರುಕು ಮುರುಕು ಇಂಗ್ಲಿಷ್ನಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರದ ಕೇಂದ್ರ ಕಚೇರಿಗೆ ಪತ್ರ ಬರೆದು, ಕೋಚ್ ಲೈಂಗಿಕ ಸುಖ ನೀಡುವಂತೆ ಅಪೇಕ್ಷಿಸುತ್ತಿದ್ದಾರೆ ಎಂದು ದೂರಿದ್ದರು. ಇದಕ್ಕೆ ಒಪ್ಪದಿದ್ದಲ್ಲಿ ಇಡೀ ವೃತ್ತಿಯನ್ನು ಹಾಳು ಮಾಡುವುದಾಗಿ ಬೆದರಿಕೆ ಹಾಕಿದ್ದರು ಎಂದು ಆಪಾದಿಸಿದ್ದರು.
ಇಂಥದ್ದೇ ಆರೋಪ ಗುಜರಾತ್ ಕ್ಯಾಂಪ್ನಲ್ಲಿ ಪಾಲ್ಗೊಂಡಿರುವ ಅಥ್ಲೀಟ್ಗಳಿಂದಲೂ ಕೇಳಿಬಂದಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ. ಮತ್ತೊಂದು ಕಿರುಕುಳ ಪ್ರಕರಣ ಬೆಂಗಳೂರು ಸಾಯ್ ಕೇಂದ್ರದಿಂದಲೂ ಕೇಳಿಬಂದಿದೆ. ಅಕಾಡಮಿಯ ಮಹಿಳಾ ಕೋಚ್ಗೆ ಕೇಂದ್ರದ ಲೆಕ್ಕಿಗ ಸಂದೇಶ ರವಾನಿಸಿರುವುದು ಪತ್ತೆಯಾಗಿತ್ತು.
ಸಾಕಷ್ಟು ಇಂಥ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಸಾಯ್ ನಿರ್ದೇಶಕ ಜನರಲ್ ನೀಲಂ ಕಪೂರ್ ತಕ್ಷಣ ಈ ಬಗ್ಗೆ ಗಮನ ಹರಿಸಿದ್ದಾರೆ. ತಮಿಳುನಾಡು ಪ್ರಕರಣದಲ್ಲಿ ಶಾಮೀಲಾದ ಆರೋಪ ಎದುರಿಸುತ್ತಿರುವ ಕೋಚ್ ಮೇಲಿನ ಆರೋಪ ಆಂತರಿಕ ವಿಚಾರಣೆಯಲ್ಲಿ ದೃಢಪಟ್ಟ ಹಿನ್ನೆಲೆಯಲ್ಲಿ ಅವರನ್ನು ವಜಾಗೊಳಿಸಿದರು.
ತರಬೇತಿ ಪಡೆಯುವವರು ದೂರು ಅರಿವಿಗೆ ಬಂದ ತಕ್ಷಣ ಮೈಕ್ನಲ್ಲಿ ಬೆದರಿಕೆ ಹಾಕಿ ಯಾರು ದೂರು ನೀಡಿದ್ದು ಎನ್ನುವುದನ್ನು ಬಾಯಿ ಬಿಡಬೇಕು ಎಂದು ಹೇಳಿದ್ದರು. ಪದೇ ಪದೇ ಇಂಥ ಅಪರಾಧ ಎಸಗಿದ್ದರು ಎಂದು ಆಂತರಿಕ ವಿಚಾರಣೆಯಲ್ಲಿ ತಿಳಿದ ಬಳಿಕ ವಜಾಗೊಳಿಸಲಾಗಿದೆ.