ಕ್ರೈಸ್ತ ಸನ್ಯಾಸಿನಿ ಮೇಲೆ ಅತ್ಯಾಚಾರ ಆರೋಪ: ಬಿಷಪ್ ವಿರುದ್ಧ ಪ್ರಕರಣ ದಾಖಲು
ತಿರುವನಂತಪುರಂ, ಜೂ.30: ಸಿರೊ- ಮಲಬಾರ್ ಚರ್ಚ್ನ ಬಿಷಪ್ ತನ್ನ ಮೇಲೆ ಅತ್ಯಾಚಾರ ನಡೆಸಿರುವುದಾಗಿ ಕ್ರೈಸ್ತ ಸನ್ಯಾಸಿನಿ ನೀಡಿದ ದೂರಿನನ್ವಯ ಬಿಷಪ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಬಿಷಪ್ ಕೂಡಾ ದೂರು ನೀಡಿದ್ದು ಕೈಸ್ತ ಸನ್ಯಾಸಿನಿ ತನ್ನನ್ನು ಬ್ಲಾಕ್ಮೇಲ್ ಮಾಡುತ್ತಿದ್ದು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಿಕ್ಕಿಸಿ ಹಾಕುವುದಾಗಿ ಬೆದರಿಕೆ ಒಡ್ಡಿದ್ದಾಳೆ ಎಂದು ಆರೋಪಿಸಿದ್ದಾರೆ. ಸಿರೊ- ಮಲಬಾರ್ ಚರ್ಚ್ನ ಬಿಷಪ್ ಫ್ರಾಂಕ್ ಮುಲ್ಲಕ್ಕಲ್ ವಿರುದ್ಧ ಅತ್ಯಾಚಾರ ಆರೋಪದಲ್ಲಿ ಕುರವಿಳಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
2014ರಲ್ಲಿ ಮಹತ್ವದ ವಿಷಯವೊಂದನ್ನು ಚರ್ಚಿಸಬೇಕೆಂಬ ನೆಪದಲ್ಲಿ ತನ್ನನ್ನು ಕರೆಸಿಕೊಂಡ ಬಿಷಪ್ ಅತ್ಯಾಚಾರ ನಡೆಸಿದ್ದಾರೆ. ಬಳಿಕ ಎರಡು ವರ್ಷದಲ್ಲಿ 13 ಬಾರಿ ಅತ್ಯಾಚಾರ ನಡೆಸಿದ್ದಾರೆ. ಕಳೆದ ವರ್ಷ ಈ ಕುರಿತು ಚರ್ಚ್ ಆಡಳಿತ ಮಂಡಳಿಗೆ ದೂರು ನೀಡಿದ್ದೆ. ಆದರೆ ಅವರು ಕ್ರಮ ಕೈಗೊಳ್ಳದ ಕಾರಣ ಪೊಲೀಸರಲ್ಲಿ ದೂರು ದಾಖಲಿಸಬೇಕಾಗಿದೆ ಎಂದು ಕ್ರೈಸ್ತ ಸನ್ಯಾಸಿನಿ ತಿಳಿಸಿದ್ದಾರೆ. ದೂರು ನೀಡಿದ ಬಳಿಕ ತನ್ನನ್ನು ಕೆಲಸದಿಂದ ತೆಗೆದು ಹಾಕಲಾಗಿದ್ದು ಹಣಕಾಸಿನ ಅವ್ಯವಹಾರ ನಡೆಸಿರುವ ಆರೋಪ ಹೊರಿಸಲಾಗಿದೆ ಎಂದು ಮಹಿಳೆ ದೂರಿದ್ದಾರೆ. ಚರ್ಚ್ ಆಡಳಿತ ಮಂಡಳಿಯಿಂದ ತನಗೆ ನ್ಯಾಯ ಸಿಗದಿದ್ದರೆ ಪೋಪ್ಗೆ ದೂರು ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.
ಹಣಕಾಸಿನ ಅವ್ಯವಹಾರ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಮಹಿಳೆಯ ವಿರುದ್ಧ ಕ್ರಮ ಕೈಗೊಂಡಿದ್ದರಿಂದ ಆಕ್ರೋಶಗೊಂಡಿರುವ ಆಕೆ ತನ್ನ ವಿರುದ್ಧ ಸುಳ್ಳು ದೂರು ನೀಡಿದ್ದಾಳೆ ಎಂದು ಬಿಷಪ್ ಪ್ರತಿಕ್ರಿಯಿಸಿದ್ದಾರೆ.