ಮಕ್ಕಳ ಮಾರಾಟ ಜಾಲ: ಕ್ರೈಸ್ತ ಸನ್ಯಾಸಿನಿ ಬಂಧನ
ರಾಂಚಿ, ಜು. 5: ಮಕ್ಕಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಜಾಲದಲ್ಲಿ ಶಾಮೀಲಾದ ಆರೋಪದಲ್ಲಿ "ಮಿಷಿನರೀಸ್ ಆಫ್ ಚಾರಿಟಿ" ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದ ಕ್ರೈಸ್ತ ಸನ್ಯಾಸಿನಿಯೊಬ್ಬಳನ್ನು ಪೊಲೀಸರು ಬಂಧಿಸಿದ್ದಾರೆ.
ಮಕ್ಕಳನ್ನು ದತ್ತು ಪಡೆಯಲು ಉತ್ಸುಕರಾಗಿರುವ ದಂಪತಿಗಳಿಂದ ದೊಡ್ಡ ಮೊತ್ತದ ಹಣವನ್ನು ಸ್ವೀಕರಿಸಿ ಈ ದಂಧೆ ನಡೆಸುತ್ತಿದ್ದಳು ಎಂದು ಆರೋಪಿಸಲಾಗಿದೆ.
ಈ ಮಹಿಳೆ ಕೆಲಸ ಮಾಡುತ್ತಿದ್ದ ಸಂಘಟನೆಗೆ 1.2 ಲಕ್ಷ ರೂಪಾಯಿ ನೀಡಿದ ಬಳಿಕವೂ ಮಗುವನ್ನು ಪಡೆಯಲು ಸಾಧ್ಯವಾಗಿಲ್ಲ ಎಂದು ದಂಪತಿ ಮಕ್ಕಳ ಕಲ್ಯಾಣ ಸಮಿತಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ತನಿಖೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಈ ಮಧ್ಯೆ ಸಂಸ್ಥೆಯ ವಿರುದ್ಧ ಮಾನವ ಕಳ್ಳತನ ಆರೋಪ ಹೊರಿಸಿ ಎಫ್ಐಆರ್ ದಾಖಲಾಗಿದೆ. ಈ ಸಂಬಂಧ ಮಿಷಿನರೀಸ್ ಆಫ್ ಚಾರಿಟಿ ಪರವಾಗಿ ಕೆಲಸ ಮಾಡುತ್ತಿದ್ದ ಅನಿಮಾ ಇಂದ್ವಾರ್ ಎಂಬಾಕೆಯನ್ನು ಬಂಧಿಸಲಾಗಿದೆ. ಇದೇ ಸಂಸ್ಥೆಯ ಇನ್ನೋರ್ವ ಸಿಸ್ಟರ್ ಕೂಡಾ ಈ ದಂಧೆಯಲ್ಲಿ ಷಾಮೀಲಾಗಿರುವ ಬಗ್ಗೆ ತನಿಖೆ ವೇಳೆ ತಿಳಿದುಬಂದಿದೆ ಎಂದು ಎಸ್ಪಿ ಅಮನ್ ಕುಮಾರ್ ಹೇಳಿದ್ದಾರೆ.
ಸಿಸ್ಟರ್ ಬಳಿ ಇದ್ದ 65 ಸಾವಿರ ರೂಪಾಯಿ ವಶಪಡಿಸಿಕೊಳ್ಳಲಾಗಿದೆ. ಅವಿವಾಹಿತ ತಾಯಂದಿರ ಮಕ್ಕಳನ್ನು ಈ ಸಿಸ್ಟರ್ಗಳು 50 ಸಾವಿರದಿಂದ 1.5 ಲಕ್ಷ ರೂಪಾಯಿವರೆಗೆ ಅಕ್ರಮವಾಗಿ ಮಾರಾಟ ಮಾಡುತ್ತಿದ್ದರು ಎಂದು ಎಸ್.ಎನ್.ಮಂಡಲ್ ಕೊತ್ವಾಲಿ ಠಾಣಾಧಿಕಾರಿ ವಿವರಿಸಿದ್ದಾರೆ. ನಾಲ್ಕು ಮಕ್ಕಳನ್ನು ಈ ರೀತಿ ಮಾರಾಟ ಮಾಡಿರುವುದು ದೃಢಪಟ್ಟಿದೆ ಎಂದು ಬಹಿರಂಗಪಡಿಸಿದ್ದಾರೆ.