3 ದಿನಗಳ ಕಾಲ ಬಾಲಕಿಯ ಅತ್ಯಾಚಾರಗೈದ 6 ಬಾಲಕರು
ಮುಝಾಫರನಗರ್, ಜು. 5: ಇಲ್ಲಿನ ಕೊಟ್ವಾಲಿ ಪೊಲೀಸ್ ಠಾಣಾ ಪ್ರದೇಶದಿಂದ ಕಳೆದ ತಿಂಗಳು ಅಪಹರಿಸಿದ ಬಳಿಕ 12 ವರ್ಷದ ದಲಿತ ಬಾಲಕಿಯ ಮೇಲೆ 6 ಮಂದಿ ಬಾಲಕರು ಮೂರು ದಿನಗಳ ಕಾಲ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇವರಲ್ಲಿ ಐವರು 14 ಹಾಗೂ 16 ವರ್ಷಗಳ ನಡುವಿನ ಅಪ್ರಾಪ್ತರು. ಆರು ಮಂದಿ ಆರೋಪಿಗಳ ಗುರುತನ್ನು ಇನ್ನಷ್ಟೆ ಪತ್ತೆ ಹಚ್ಚಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ. ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿ ಕೊಡಲಾಗಿದೆ. ಎಲ್ಲ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಆರೋಪಿಗಳ ವಿರುದ್ಧ ದೂರು ದಾಖಲಿಸುವಂತೆ ಆಗ್ರಹಿಸಿ ಬಾಲಕಿ ಹಾಗೂ ಆಕೆಯ ಅಜ್ಜಿ ಬುಧವಾರ ಬೆಳಗ್ಗೆ ಇಲ್ಲಿನ ಜಿಲ್ಲಾ ದಂಡಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ. ಪೊಲೀಸರು ಪ್ರಥಮ ಮಾಹಿತಿ ವರದಿ ದಾಖಲಿಸಲು ನಿರಾಕರಿಸಿದ್ದಾರೆ ಎಂದು ಅವರು ಆರೋಪಿಸಿದ್ದರು. ಜಿಲ್ಲೆಯ ಕುಕ್ರಾ ಗ್ರಾಮಕ್ಕೆ ತೆರಳುತ್ತಿದ್ದ ಬಾಲಕಿಯನ್ನು ಇಲ್ಲಿಂದ ಜೂನ್ 26ರಂದು ಬಾಲಕರ ತಂಡವೊಂದು ಅಪಹರಿಸಿತ್ತು ಎಂದು ಸಂತ್ರಸ್ತೆಯ ಅಜ್ಜಿ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.