ಸೀಟು ಹಂಚಿಕೆ ಚರ್ಚೆಗಾಗಿ ನಿತೀಶ್ ಕುಮಾರ್ ಭೇಟಿಯಾದ ಅಮಿತ್ ಶಾ
ಪಾಟ್ನಾ, ಜು.12: ಬಿಜೆಪಿ ಅಧ್ಯಕ್ಷ ಅಮಿತ್ ಶಾ ಗುರುವಾರದಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಭೇಟಿ ಮಾಡಿದರು. ರಾಜ್ಯದಲ್ಲಿ ಎರಡು ಪಕ್ಷಗಳ ಮಧ್ಯೆ ಸೀಟು ಹಂಚಿಕೆ ಹಾಗೂ ಇತರ ವಿಷಯಗಳ ಬಗ್ಗೆ ಚರ್ಚೆ ನಡೆಸಲು ಶಾ, ನಿತೀಶ್ ಕುಮಾರ್ ಜೊತೆ ಚರ್ಚೆ ನಡೆಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಇಬ್ಬರು ನಾಯಕರ ಭೇಟಿಯಿಂದ ಬಿಹಾರದಲ್ಲಿ ಮೈತ್ರಿಯ ಭವಿಷ್ಯದ ಕುರಿತು ಇದ್ದ ಎಲ್ಲ ಊಹಾಪೋಹಗಳಿಗೆ ಪೂರ್ಣ ವಿರಾಮ ಬೀಳಲಿದೆ ಎಂದು ಬಿಜೆಪಿ ನಾಯಕರು ತಿಳಿಸಿದ್ದಾರೆ. ಬಿಜೆಪಿ ಮತ್ತು ಜೆಡಿಯು ಮಧ್ಯೆ ಸೀಟು ಹಂಚಿಕೆ ವಿಷಯದಲ್ಲಿ ಎರಡೂ ಪಕ್ಷಗಳ ನಾಯಕರು ವಿಭಿನ್ನ ಹೇಳಿಕೆಗಳನ್ನು ನೀಡುವ ಮೂಲಕ ಎರಡು ಪಕ್ಷಗಳ ಮೈತ್ರಿಯಲ್ಲಿ ಬಿರುಕು ಮೂಡಿದೆ ಎಂದು ಅನುಮಾನಿಸಲಾಗಿತ್ತು. ಈ ಅನುಮಾನವನ್ನು ದೂರ ಮಾಡುವ ಸಲುವಾಗಿ ಎರಡೂ ಪಕ್ಷದ ನಾಯಕರು ಸಭೆ ನಡೆಸಬೇಕೆಂದು ಈ ತಿಂಗಳ ಆರಂಭದಲ್ಲಿ ನಿರ್ಧರಿಸಲಾಗಿತ್ತು. 2019ರ ಚುನಾವಣೆಯಲ್ಲಿ ಬಿಹಾರದಲ್ಲಿ ಜೆಡಿಯುಗೆ ಹೆಚ್ಚಿನ ಸ್ಥಾನಗಳು ಸಿಗಬೇಕೆಂದು ಪಕ್ಷದ ಹಲವು ನಾಯಕರು ಬಯಸಿದ್ದಾರೆ ಎಂಬುದು ಅವರ ಹೇಳಿಕೆಗಳಿಂದ ತಿಳಿದುಬಂದಿತ್ತು.
ಆದರೆ ಸೀಟು ಹಂಚಿಕೆ ಕುರಿತುನಮಗೆ ಯಾವುದೇ ಪ್ರಸ್ತಾವ ಬಂದಿಲ್ಲ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳುವ ಮೂಲಕ ಎಲ್ಲ ವದಂತಿಗಳಿಗೆ ಕೊನೆ ಹಾಡಲಾಗಿತ್ತು. ಇದೀಗ ಅಮಿತ್ ಶಾ ಬಿಹಾರ ಭೇಟಿಯಿಂದ ಅಲ್ಲಿನ ಬಿಜೆಪಿ ಕಾರ್ಯಕರ್ತರಲ್ಲಿ ಹೊಸಹುಮ್ಮಸ್ಸು ಮೂಡಿದೆ. ಪಕ್ಷವು ಅಮಿತ್ ಶಾ ನಾಯಕತ್ವದಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಅವರ ಬಿಹಾರ ಭೇಟಿಯು ಐತಿಹಾಸಿಕವಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಿತ್ಯಾನಂದ ರಾಯ್ ತಿಳಿಸಿದ್ದಾರೆ.