ಪ್ರಶಂಸೆಗೆ ಪಾತ್ರವಾದ ಮುಂಬೈ ಪೊಲೀಸರ ಟ್ವೀಟ್
ಮುಂಬೈ, ಜು.12: ಮುಂಬೈಯಲ್ಲಿ ಕಳೆದ ಹಲವು ದಿನಗಳಿಂದ ವ್ಯಾಪಕ ಮಳೆಯಾಗುತ್ತಿದ್ದು, ಜನರ ಸುರಕ್ಷತೆಗಾಗಿ ನಾವಿದ್ದೇವೆ ಎಂದು ಪೊಲೀಸ್ ಇಲಾಖೆ ಟ್ವಿಟರ್ನಲ್ಲಿ ಹೇಳಿಕೊಂಡಿದೆ. ಮುಂಬೈ ಪೊಲೀಸ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ನಲ್ಲಿ ಮುಖ್ಯ ಸಂದೇಶಗಳನ್ನು ಅತ್ಯಂತ ತಮಾಷೆ ಮತ್ತು ಜನರಿಗೆ ನಾಟುವ ರೀತಿಯಲ್ಲಿ ಬರೆಯಲಾಗುತ್ತದೆ. ಇದರಿಂದಾಗಿಯೇ ಮುಂಬೈ ಪೊಲೀಸ್ ಇಲಾಖೆಯ ಟ್ವೀಟ್ಗಳು ಟ್ವೀಟಿಗರಿಂದ ಪ್ರಶಂಸೆಗೆ ಪಾತ್ರವಾಗಿದೆ.
ಮಹಿಳಾ ಸುರಕ್ಷತೆ, ಆನ್ಲೈನ್ ವಂಚನೆ, ರಸ್ತೆ ಸುರಕ್ಷತೆ ಹಾಗೂ ಇತರ ಸೂಕ್ಷ್ಮ ವಿಷಯಗಳ ಬಗ್ಗೆ ಜನರಿಗೆ ತಿಳಿಸುವಾಗಲೇ ಗಂಭೀರ ವಾಕ್ಯಗಳನ್ನು ಬರೆಯದೆ ಜನರು ಓದುವ ಹಾಗೆ ಲಘುವಾದ ಆದರೂ ಪರಿಣಾಮಕಾರಿಯಾದ ವಾಕ್ಯಗಳನ್ನು ಮುಂಬೈ ಪೊಲೀಸ್ ಇಲಾಖೆ ಟ್ವೀಟ್ ಮಾಡುತ್ತದೆ. ಈ ಬಾರಿ ವ್ಯಾಪಕ ಮಳೆಯಿಂದ ಸಂಕಷ್ಟಕ್ಕೀಡಾದ ಜನರ ರಕ್ಷಣೆಗೆ ಧಾವಿಸಿದ ಸಂದರ್ಭದಲ್ಲೂ ಇದೇ ರೀತಿಯ ಟ್ವೀಟನ್ನು ಮಾಡುವ ಮೂಲಕ ಮುಂಬೈ ಪೊಲೀಸ್ ಮತ್ತೆ ಸುದ್ದಿಯಾಗಿದೆ. ಮಳೆ ಸುರಿಯಲು ಆರಂಭವಾದಾಗ ನಾವು ನಿಮ್ಮ ಜೊತೆಗಿರುತ್ತೇವೆ. ಈ ಹಿಂದೆ ನಿಮ್ಮೊಂದಿಗಿದ್ದಂತೆ ಮುಂದೆಯೂ ನಿಮ್ಮ ಜೊತೆಗಿರುತ್ತೇವೆ ಎಂದು ಮುಂಬೈ ಪೊಲೀಸ್ ಇಲಾಖೆ ಟ್ವೀಟ್ ಮಾಡಿದೆ.
ಪೊಲೀಸರ ಕಾಳಜಿಗೆ ಮುಂಬೈ ನಿವಾಸಿಗಳು ಅಭಿನಂದನೆಗಳನ್ನು ಸಲ್ಲಿಸಿದ್ದು, ಬಿಸಿಲು, ಮಳೆ ಯಾವುದನ್ನೂ ಲೆಕ್ಕಿಸದೆ ದಿನದ 24 ಗಂಟೆಯೂ ನಗರದ ಸುರಕ್ಷತೆಗಾಗಿ ದುಡಿಯುವ ಪೊಲೀಸ್ ಇಲಾಖೆಯಿಂದಾಗಿ ನಾವು ಸುರಕ್ಷಿತರಾಗಿದ್ದೇವೆ ಎಂದು ಹಲವರು ಟ್ವಿಟರ್ನಲ್ಲಿ ಪ್ರಶಂಸೆಗಳ ಸುರಿಮಳೆಗರೆದಿದ್ದಾರೆ.