ನೀಟ್ ನಲ್ಲಿ ಸೊನ್ನೆ ಅಂಕ ಪಡೆದ ಹಲವರಿಗೆ ಎಂಬಿಬಿಎಸ್ ಕೋರ್ಸ್ ಗಳಿಗೆ ಪ್ರವೇಶಾತಿ!
ಹೊಸದಿಲ್ಲಿ, ಜು.16: ವೈದ್ಯಕೀಯ ಕೋರ್ಸುಗಳಿಗೆ ಪ್ರವೇಶಾತಿಗಾಗಿ ನಡೆಸಲಾಗುವ ನೀಟ್ ಪರೀಕ್ಷೆಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ ಹಾಗೂ ಜೀವಶಾಸ್ತ್ರ ವಿಷಯಗಳ್ಲಲಿ ಪ್ರತ್ಯೇಕ ಕಟ್-ಆಫ್ ಇಲ್ಲದೇ ಇದ್ದ ಕಾರಣ ಕಳೆದ ವರ್ಷ ಒಂದಂಕಿ ಅಂಕಗಳನ್ನು ಪಡೆದಿದ್ದ ಕನಿಷ್ಠ 400 ವಿದ್ಯಾರ್ಥಿಗಳು ಹಾಗೂ ಸೊನ್ನೆ ಅಥವಾ ನೆಗೆಟಿವ್ ಅಂಕಗಳನ್ನು ಪಡೆದ 110 ವಿದ್ಯಾರ್ಥಿಗಳು ಎಂಬಿಬಿಎಸ್ ಕೋರ್ಸುಗಳಿಗೆ ಖಾಸಗಿ ಕಾಲೇಜುಗಳಲ್ಲಿ ಪ್ರವೇಶಾತಿ ಪಡೆದಿದ್ದಾರೆ ಎಂದು timesofindia.indiatimes.com ವರದಿ ಮಾಡಿದೆ.
ಮೂಲ ಅಧಿಸೂಚನೆಯಲ್ಲಿ ವಿದ್ಯಾರ್ಥಿಗಳು ಪ್ರತಿಯೊಂದು ವಿಷಯದಲ್ಲೂ ಕನಿಷ್ಠ ಶೇ.50 ಅಂಕಗಳನ್ನು ಪಡೆಯಬೇಕೆಂದಿದ್ದರೂ ಈ ಬಗೆಗಿನ ನಿಬಂಧನೆಯನ್ನು ನಂತರ ತೆಗೆದು ಹಾಕಲಾಗಿತ್ತು.
2017ರಲ್ಲಿ ಒಟ್ಟು 720 ಅಂಕಗಳಲ್ಲಿ 150ಕ್ಕಿಂತಲೂ ಕಡಿಮೆ ಅಂಕಗಳನ್ನು ಪಡೆದು ಎಂಬಿಬಿಎಸ್ ಕೋರ್ಸುಗಳಿಗೆ ಪ್ರವೇಶ ಪಡೆದ 1,990 ವಿದ್ಯಾರ್ಥಿಗಳ ಅಂಕಗಳನ್ನು ಪತ್ರಿಕೆಯೊಂದು ಪರಿಶೀಲಿಸಿದಾಗ 530 ಮಂದಿಗೆ ಒಂದಂಕಿ ಅಂಕಗಳಿತ್ತಲ್ಲದೆ ಕೆಲವರಿಗೆ ಭೌತಶಾಸ್ತ್ರದಲ್ಲಿ ಅಥವಾ ರಸಾಯನಶಾಸ್ತ್ರದಲ್ಲಿ ಸೊನ್ನೆ ಅಥವಾ ಎರಡರಲ್ಲೂ ಸೊನ್ನೆ ದೊರಕಿತ್ತೆಂದು ತಿಳಿದು ಬಂದಿತ್ತು.
ಈ ರೀತಿಯಾಗಿ ಕನಿಷ್ಠ ಅಥವಾ ಸೊನ್ನೆ ಅಂಕಗಳನ್ನು ಪಡೆದ ಹೊರತಾಗಿಯೂ ಖಾಸಗಿ ಮೆಡಿಕಲ್ ಕಾಲೇಜುಗಳಿಗೆ ವಾರ್ಷಿಕ ಸರಾಸರಿ ರೂ 17 ಲಕ್ಷ ಪಾವತಿಸಿ ಶ್ರೀಮಂತ ಕುಟುಂಬದ ಅಭ್ಯರ್ಥಿಗಳು ಪ್ರವೇಶಾತಿ ಪಡೆದಿದ್ದಾರೆ. ಕೇವಲ ಮೆರಿಟ್ ಆಧಾರದಲ್ಲಿಯೇ ವೈದ್ಯಕೀಯ ಪ್ರವೇಶಾತಿ ಪಡೆಯಬೇಕೆಂದು ನೀಟ್ ನಡೆಸಲಾಗುತ್ತಿದ್ದರೆ ಈ ವಿದ್ಯಾರ್ಥಿಗಳು ಏನೇನೂ ಅಂಕ ಗಳಿಸದೇ ಇದ್ದರೂ ವೈದ್ಯಕೀಯ ಕಾಲೇಜುಗಳಿಗೆ ದುಬಾರಿ ಶುಲ್ಕ ತೆತ್ತು ಪ್ರವೇಶಾತಿ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.