ರಸ್ತೆ ಅಪಘಾತದಿಂದ ಬೆಂಕಿಗಾಹುತಿಯಾದ ಕಾರು: 9 ಮಂದಿ ಮೃತ್ಯು
ಅಹಮದಾಬಾದ್, ಜು.18: ಕಾರೊಂದು ಬೆಂಕಿಗಾಹುತಿಯಾದ ಪರಿಣಾಮ ಒಂಬತ್ತು ಮಂದಿ ಸಾವನ್ನಪ್ಪಿದ ಘಟನೆ ಗುಜರಾತ್ನ ಸೌರಾಷ್ಟ್ರ ಪ್ರದೇಶದ ಮೊರ್ಬಿ ಪಟ್ಟಣದಲ್ಲಿ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಜ್ಕೋಟ್ ಮೂಲದ ಕುಟುಂಬವು ಕಚ್ಗೆ ತೆರಳಿ ಮರಳುತ್ತಿದ್ದ ಸಂದರ್ಭದಲ್ಲಿ ಎದುರಿನಿಂದ ವೇಗವಾಗಿ ಬಂದ ಟ್ರಕ್ ಇವರಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಕುಟುಂಬವು ಪ್ರಯಾಣಿಸುತ್ತಿದ್ದ ಮಾರುತಿ ಕಾರಿಗೆ ಗ್ಯಾಸ್ ಅಳವಡಿಸಲಾಗಿದ್ದ ಕಾರಣ ಢಿಕ್ಕಿ ರಭಸಕ್ಕೆ ಬೆಂಕಿ ಹೊತ್ತಿಕೊಂಡಿದೆ. ಪರಿಣಾಮವಾಗಿ ಏಳು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಉಳಿದ ಇಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ಬಲ್ವಂತ್ ಕಲದಿಯ, ರಮೇಶ್ ಕಲದಿಯ, ಮೀನಾ ಕಲದಿಯ, ಸಾಗರ್ ಕಲದಿಯ, ಮಹೇಶ್ ಕಲದಿಯ, ಸಂಗೀತ ಕಲದಿಯ, ರಾಜೇಶ್ ಕಲದಿಯ, ಭಾವನಾ ಕಲದಿಯ ಮತ್ತು ಚಾಲಕ ಜಯಂತಿ ಅದ್ಸೆಸರ ಎಂದು ಗುರುತಿಸಲಾಗಿದೆ. ಘಟನೆಯ ನಂತರ ಟ್ರಕ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದು ಟ್ರಕ್ನ ನಂಬರ್ ಪ್ಲೇಟ್ ನಾಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.