ಪತ್ನಿಗೆ ಕರೆಂಟ್ ಶಾಕ್ ನೀಡಿ ಕೊಲೆಗೈದ ಸೈನಿಕ
ರಾಯ್ ಪುರ, ಜು.19: ಸಿಎಎಫ್ ಜವಾನನೊಬ್ಬ ಪತ್ನಿಯನ್ನು ಕರೆಂಟ್ ಶಾಕ್ ಕೊಟ್ಟುಕೊಲೆಗೈದ ಘಟನೆ ಛತ್ತೀಸ್ ಗಡ್ ನ ಭಟಪಾರ ಎಂಬಲ್ಲಿ ನಡೆದಿದೆ. ಛತ್ತೀಸ್ ಗಡದ ಸಶಸ್ತ್ರ ಸೇನಾ ಪಡೆ(ಸಿಎಎಫ್) ಜವಾನ ಸುರೇಶ್ ಮಿರಿ ತನ್ನ ಪತ್ನಿ ಲಕ್ಷ್ಮೀ (27) ಎಂಬವರನ್ನು ಕರೆಂಟ್ ಶಾಕ್ ಕೊಟ್ಟು ಕೊಲೆ ಮಾಡಿರುವುದು ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ.
ಸುರೇಶ್ ತನ್ನ ಪತ್ನಿಗೆ ಅಕ್ರಮ ಸಂಬಂಧವಿದೆ ಎಂಬ ಸಿಟ್ಟಿನಿಂದ ಆಕೆಯ ಖಾಸಗಿ ಭಾಗಗಳಿಗೆ ವಿದ್ಯುತ್ ಶಾಕ್ ನೀಡಿ ಕೊಲೆಗೈದ ಬಳಿಕ ಆಕೆ ಅಸೌಖ್ಯದಿಂದ ಮೃತಪಟ್ಟಿರುವುದಾಗಿ ಸಂಬಂಧಿಕರಿಗೆ ಮಾಹಿತಿ ನೀಡಿದ್ದ ಎನ್ನಲಾಗಿದೆ.
ದಾಂತೆವಾಡ ಜಿಲ್ಲೆಯ 6ನೇ ಬೆಟಲಿಯನ್ ನಲ್ಲಿ ಜವಾನ ಆಗಿದ್ದ ಸುರೇಶ್ ಮಿರಿ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಭಟಪಾರದ ವಸತಿ ಬೋರ್ಡ್ ಕಾಲೊನಿಯಲ್ಲಿ ನೆಲೆಸಿದ್ದನು. ಸುರೇಶ್ ತನ್ನ ಲಕ್ಮೀ ಜೊತೆ ಅಕ್ರಮ ಸಂಬಂಧ ಹೊಂದಿರುವ ಬಗ್ಗೆ ಸಂಶಯಗೊಂಡಿದ್ದ. ಈ ವಿಚಾರದಲ್ಲಿ ಇವರ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎಂದು ತಿಳಿದು ಬಂದಿದೆ. ಮಂಗಳವಾರ ತನ್ನ ಪತ್ನಿ ಲಕ್ಷ್ಮೀ ಬಾತ್ ರೂಂನಲ್ಲಿ ಬಟ್ಟೆ ತೊಳೆಯುತ್ತಿದ್ದ ವೇಳೆ ಆಕೆಯನ್ನು ಹಿಡಿದು ಚೆನ್ನಾಗಿ ಥಳಿಸಿದ ಎನ್ನಲಾಗಿದೆ. ಆಕೆ ಪ್ರಜ್ಞೆ ಕಳೆದುಕೊಂಡಾಗ ಸುರೇಶ್ ಕರೆಂಟ್ ಶಾಕ್ ನೀಡಿ ಕೊಲೆಗೈದು ಬಳಿಕ ಸಂಬಂಧಿಕರಿಗೆ ಮಾಹಿತಿ ನೀಡಿದ ಎನ್ನಲಾಗಿದೆ. ಸಂಬಂಧಿಕರು ನೀಡಿದ ದೂರಿನಂತೆ ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿ ಸುರೇಶ್ ನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ತನ್ನ ಪತ್ನಿಯನ್ನು ಕೊಲೆಗೈದಿರುವುದನ್ನು ಒಪ್ಪಿಕೊಂಡನು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.