ನಿಮ್ಮ ಆಧಾರ್ ನಂಬರನ್ನು ತಿಳಿಸಿ ಎಂದು ಪ್ರಧಾನಿಗೆ ಟ್ವೀಟ್ ಮಾಡಿದ ಹ್ಯಾಕರ್!
ಅವರ ಶೈಕ್ಷಣಿಕ ಮಾಹಿತಿ ತಿಳಿಸಿ ಎಂದ ಟ್ವಿಟರಿಗ
ಹೊಸದಿಲ್ಲಿ, ಜು.29: ತನ್ನ ಆಧಾರ್ ಸಂಖ್ಯೆಯನ್ನು ಟ್ವೀಟ್ ಮಾಡಿ ಹ್ಯಾಕರ್ ಗಳಿಗೆ ಸವಾಲೆಸೆದು ಟ್ರಾಯ್ ಅಧ್ಯಕ್ಷ ಆರ್.ಎಸ್.ಶರ್ಮಾ ಮುಖಭಂಗಕ್ಕೊಳಗಾದ ನಂತರ ಇದೀಗ ಅದೇ ಹ್ಯಾಕರ್ ಪ್ರಧಾನಿ ಮೋದಿಯವರು ಆಧಾರ್ ನಂಬರ್ ಹೇಳಿ ಎಂದಿದ್ದಾನೆ.
ಈ ಬಗ್ಗೆ ಟ್ವೀಟ್ ಮಾಡಿರುವ Elliot Alderson ಎನ್ನುವ ಹೆಸರಿನ ಹ್ಯಾಕರ್ “ಹಾಯ್, ನರೇಂದ್ರ ಮೋದಿ ನೀವು ನಿಮ್ಮ ಆಧಾರ್ ನಂಬರ್ ನೀಡುತ್ತೀರಾ (ಒಂದು ವೇಳೆ ಇದ್ದರೆ) ಎಂದು ಪ್ರಶ್ನಿಸಿದ್ದಾನೆ.
ಈ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಟ್ವಿಟರ್ ಬಳಕೆದಾರರೊಬ್ಬರು, “ಅವರ ಶೈಕ್ಷಣಿಕ ಮಾಹಿತಿಯನ್ನು ಆನ್ ಲೈನ್ ನಲ್ಲಿ ನೀಡಬಹುದೇ?” ಎಂದು ಪ್ರಶ್ನಿಸಿದ್ದರೆ, ಮತ್ತೊಬ್ಬರು “ನೆಟ್ ನಲ್ಲಿ ಅವರ ಡಿಗ್ರಿ ಇಲ್ಲ” ಎಂದಿದ್ದಾರೆ. ಮತ್ತೊಬ್ಬರು ಟ್ವೀಟ್ ಮಾಡಿ, “ನಿಮ್ಮ ಪ್ರಧಾನಿ ಎಂದಿಗೂ ಕಾಲೇಜ್ ಗೆ ಹೋಗಿಲ್ಲ. ಅವರು ಪ್ರೌಢಶಾಲೆ ಶಿಕ್ಷಣ ಪೂರೈಸಿದ್ದಾರೆ ಎಂದು ನನಗೆ ಸಂಶಯವಿದೆ” ಎಂದಿದ್ದಾರೆ.
ಸಾಧ್ಯವಿದ್ದರೆ ಆಧಾರ್ ಸಂಖ್ಯೆಯನ್ನು ದುರುಪಯೋಗಪಡಿಸಿಕೊಳ್ಳಿ ಎಂದು ಟ್ರಾಯ್ ಅಧ್ಯಕ್ಷ ಆರ್.ಎಸ್.ಶರ್ಮಾ ಅವರು ಹ್ಯಾಕರ್ಗಳಿಗೆ ಸವಾಲು ಎಸೆದಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ಅವರ ಪಾನ್ ಸಂಖ್ಯೆ, ಪರ್ಯಾಯ ದೂರವಾಣಿ ಸಂಖ್ಯೆ ಮತ್ತಿತರ ವಿವರಗಳನ್ನು ಹ್ಯಾಕರ್ಗಳು ಬಹಿರಂಗಪಡಿಸಿದ್ದರು.