ರೊಹಿಂಗ್ಯಾ ವಲಸಿಗರ ಶೀಘ್ರ ಗಡಿಪಾರು: ರಿಜಿಜು
ಹೊಸದಿಲ್ಲಿ, ಆ.1: ಭಾರತದಲ್ಲಿ ವಾಸಿಸುವ ರೊಹಿಂಗ್ಯಾ ವಲಸಿಗರಿಗೆ ನಿರಾಶ್ರಿತರ ಸ್ಥಾನಮಾನ ಇಲ್ಲ. ಇವರು ಅಕ್ರಮ ವಲಸಿಗರಾಗಿದ್ದು, ಸೂಕ್ತ ವಿವರಗಳನ್ನು ಸಿದ್ಧಪಡಿಸಿದ ತಕ್ಷಣ ಅವರನ್ನು ಗಡೀಪಾರು ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ಪ್ರಕಟಿಸಿದೆ.
"ಅವರ ಪ್ರವೇಶ ಅಕ್ರಮ. ಅವರು ಕಾನೂನುಬಾಹಿರವಾಗಿ ವಾಸಿಸುತ್ತಿದ್ದಾರೆ. ಅವರಿಗೆ ಸರ್ಕಾರದಿಂದ ಯಾವುದೇ ಸೌಲಭ್ಯ ಒದಗಿಸುವ ಪ್ರಶ್ನೆಯೇ ಇಲ್ಲ. ನಾವು ಇರುವುದು ಕಾನೂನುಬದ್ಧ ನಿರಾಶ್ರಿತರಿಗೆ ಸೌಲಭ್ಯ ಕಲ್ಪಿಸುವ ಸಲುವಾಗಿ" ಎಂದು ಗೃಹಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ಅವರು ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.
ರೊಹಿಂಗ್ಯಾ ಜನ ಅಕ್ರಮ ಚಟುವಟಿಕೆಗಳಲ್ಲಿ ಪಾಲ್ಗೊಂಡಿರುವುದನ್ನು ದೃಢಪಡಿಸುವ ದಾಖಲೆಗಳೂ ನಮ್ಮ ಬಳಿ ಇವೆ ಎಂದು ಸಚಿವರು ಹೇಳಿದರಾದರೂ, ಆ ಬಗ್ಗೆ ವಿವರ ನೀಡಲು ನಿರಾಕರಿಸಿದರು. "ಆ ವಿವರಗಳನ್ನು ಬಹಿರಂಗಪಡಿಸುವ ಅಗತ್ಯವಿಲ್ಲ" ಎಂದು ಸ್ಪಷ್ಟಪಡಿಸಿದರು.
ವಿರೋಧಿ ಟಿಎಂಸಿ ಸದಸ್ಯ ಸುಗತಾ ಬೋಸ್ ತಮ್ಮ ಪ್ರಶ್ನೆಯ ವೇಳೆ, ಈ ಸಮಸ್ಯೆಯನ್ನು ಭಿನ್ನ ದೃಷ್ಟಿಕೋನದಿಂದ ಪರಿಗಣಿಸುವಂತೆ ಕೋರಿದರು. ಭಾರತ ಅಂತಾರಾಷ್ಟ್ರೀಯ ಕಾನೂನುಗಳಿಗೆ ಬದ್ಧವಾಗಿದೆಯೇ ಮತ್ತು ನಿರಾಶ್ರಿತರಿಗೆ ಆಶ್ರಯ ನೀಡುವ ತನ್ನ ಸಂಪ್ರದಾಯ ಮುಂದುವರಿಸಲಿದೆಯೇ ಎಂದು ಸ್ಪಷ್ಟನೆ ಬಯಸಿದರು. ಬೋಸ್ ನಿಲುವಿನ ಬಗ್ಗೆ ವಿಷಾದವಿದೆ ಎಂದು ರಿಜಿಜು ಕುಟುಕಿದರು.
ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಮಾತನಾಡಿ, ವಿದೇಶಿಯರ ಕಾಯ್ದೆ ಅನ್ವಯ ಅಕ್ರಮ ವಲಸಿಗರ ಗಡೀಪಾರಿಗೆ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.