ಬಿಹಾರ ಸುಧಾರಣಾ ಗೃಹಗಳಲ್ಲಿ ಬಾಲಾಪರಾಧಿಗಳಿಗೆ ಲೈಂಗಿಕ ಕಿರುಕುಳ
ಅರ್ರಾ, ಆ.2: ಮುಝಾಫರ್ ನಗರ ಪಾಲನಾಗೃಹದ ಲೈಂಗಿಕ ಕಿರುಕುಳ ಬೆಳಕಿಗೆ ಬಂದ ಬೆನ್ನಲ್ಲೇ ಬಾಲಾಪರಾಧಿಗಳ ಸುಧಾರಣಾಗೃಹದಲ್ಲೂ ಇಂಥದ್ದೇ ಹಗರಣ ವರದಿಯಾಗಿದೆ. ಮೂವರು ಬಾಲಾಪರಾಧಿಗಳು ಸಹ ಬಾಲಾಪರಾಧಿಗಳ ವಿರುದ್ಧ ದೂರು ನೀಡಿದ್ದು, ಪೊಲೀಸರು ಏಳು ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇಲ್ಲಿ ಬಾಲಾಪರಾಧಿಗಳ ಮೇಲೆ ಹಲ್ಲೆ ಮತ್ತು ಲೈಂಗಿಕ ಕಿರುಕುಳ ನಡೆಯುತ್ತಿದೆ ಎಂದು ಮೂವರು ಬಾಲಕರು ದೂರು ನೀಡಿದ ಹಿನ್ನೆಲೆಯಲ್ಲಿ ಏಳು ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಭೋಜಪುರ ಎಸ್ಪಿ ಅವಕಾಶ್ಕುಮಾರ್ ಹೇಳಿದ್ದಾರೆ.
ಕೈಮೂರ್ ಜಿಲ್ಲೆಯ ಇಬ್ಬರು ಬಾಲಾಪರಾಧಿಗಳ ವಿರುದ್ಧ ಹತ್ಯೆ ಮತ್ತು ಪರಿಶಿಷ್ಟ ಜಾತಿ ಕಾಯ್ದೆ ಅನ್ವಯ ಪ್ರಕರಣ ದಾಖಲಾಗಿದ್ದು, ವಿಚಾರಣೆ ವೇಳೆ ನ್ಯಾಯಾಲಯದಲ್ಲಿ ಈ ಇಬ್ಬರು ಬಾಲಕರು ತಮಗೆ ಸಹಚರರಿಂದ ಆಗುತ್ತಿರುವ ದೌರ್ಜನ್ಯದ ಬಗ್ಗೆ ದೂರಿದರು. ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿ ಪ್ರಕರಣ ದಾಖಲಿಸಲಾಗಿದೆ.
"ರಿಮ್ಯಾಂಡ್ ಹೋಮ್ನಲ್ಲಿರುವ ಏಳು ಮಂದಿ ನಮ್ಮ ಮೇಲೆ ಹಲ್ಲೆ ನಡೆಸಿ, ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ" ಎಂದು ಬಾಲಕರು ಆಪಾದಿಸಿದ್ದಾರೆ.
ಬಾಲಕರ ದೇಹದ ಮೇಲೂ ಗಾಯದ ಗುರುತುಗಳಿವೆ. ಈ ಹಿನ್ನೆಲೆಯಲ್ಲಿ ಐಪಿಸಿ ಸೆಕ್ಷನ್ ಅನ್ವಯ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್ಪಿ ಅವಕಾಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಲೈಂಗಿಕ ಕಿರುಕುಳ ಆರೋಪದ ಬಗ್ಗೆ ಬಾಲಕರನ್ನು ವೈದ್ಯಕೀಯ ಪರೀಕ್ಷೆಗೆ ಗುರಿಪಡಿಸಲಾಗಿದೆ. ವರದಿ ಬಂದ ಬಳಿಕ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.