ಮಧ್ಯಪ್ರದೇಶ ಮುನಿಸಿಪಲ್ ಉಪಚುನಾವಣೆ: 9 ಸ್ಥಾನಗಳಲ್ಲಿ ಕಾಂಗ್ರೆಸ್ ಜಯಭೇರಿ
ಬಿಜೆಪಿಗೆ ಮುಖಭಂಗ
ಭೋಪಾಲ್, ಆ.8: ಮಧ್ಯಪ್ರದೇಶ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ತಿಂಗಳುಗಳು ಇರುವಾಗ ರಾಜ್ಯದ 13 ಜಿಲ್ಲೆಗಳಲ್ಲಿನ 14 ಮುನಿಸಿಪಲ್ ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ 9 ಸ್ಥಾನಗಳನ್ನು ಗೆದ್ದು, ಈ ಹಿಂದೆ ಇದ್ದ ಸ್ಥಾನಗಳಿಗಿಂತ ಮೂರು ಹೆಚ್ಚುವರಿ ಸ್ಥಾನಗಳನ್ನು ಪಡೆದಿದೆ. ಆಡಳಿತ ಬಿಜೆಪಿಗೆ ಕೇವಲ ನಾಲ್ಕು ಸ್ಥಾನಗಳು ದೊರೆತರೆ ಪಕ್ಷೇತರ ಅಭ್ಯರ್ಥಿಗೆ ಒಂದು ಸ್ಥಾನ ಲಭಿಸಿದೆ. ಚುನಾವಣೆ ಆಗಸ್ಟ್ 3ರಂದು ನಡೆದಿತ್ತು.
ಮುಖ್ಯಮಂತ್ರಿ ಶಿವರಾಜ್ ಚೌಹಾಣ್ ಅವರ ಕುಸಿಯುತ್ತಿರುವ ಜನಪ್ರಿಯತೆ ಈ ಚುನಾವಣಾ ಫಲಿತಾಂಶದಿಂದ ಸ್ಪಷ್ಟವಾಗಿದೆ ಎಂದು ಕಾಂಗ್ರೆಸ್ ಹೇಳಿದೆ. ಆದರೆ ಬಿಜೆಪಿ ಈ ವಾದವನ್ನು ತಿರಸ್ಕರಿಸಿದೆಯಲ್ಲದೆ ಪಕ್ಷವು ಉಪಚುನಾವಣೆಗೆ ಅಷ್ಟೊಂದು ಮಹತ್ವ ನೀಡಿರಲಿಲ್ಲ ಎಂದು ಹೇಳಿದೆ.
ಕಾಂಗ್ರೆಸ್ ಗೆದ್ದ ಒಂಬತ್ತು ಸ್ಥಾನಗಳ ಪೈಕಿ ಎರಡು ಸ್ಥಾನಗಳು ಛಿಂಡ್ವಾರ ಜಿಲ್ಲೆಯಲ್ಲಿದ್ದವು. ಇದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್ ಅವರ ತವರು ಕ್ಷೇತ್ರವಾಗಿದೆ. ಇದರ ಹೊರತಾಗಿ ಕಾಂಗ್ರೆಸ್ ಅಭ್ಯರ್ಥಿಗಳು ಸರ್ವಾನಿಯ ಮಹರಾಜ್, ನೇಪಾನಗರ್, ದಬ್ರ, ಸಿಂಗ್ರೌಲಿ, ಬೈರಾಸಿಯಾ, ಸತ್ನಾ, ರಾಘೋಘರ್, ವಿಜಯಪುರ್ ಕ್ಷೇತ್ರಗಳಲ್ಲಿ ಜಯ ಗಳಿಸಿದ್ದಾರೆ.
ಚುನಾವಣೆಗಿಂತ ಮುಂಚೆ ಮುಖ್ಯಮಂತ್ರಿ ಚೌಹಾಣ್ ಅವರ ಜನ್ ಆಶೀರ್ವಾದ್ ಯಾತ್ರೆಯು ದಾಮೋಹ್, ದಟಿಯ, ಭಿಂಡ್, ಅನುಪ್ಪುರ್ ಹಾಗೂ ಸತ್ನಾ ಜಿಲ್ಲೆಗಳಿಗೆ ಭೇಟಿ ನೀಡಿತ್ತು. ಬಿಜೆಪಿ ದಾಮೋಹ್, ದಟಿಯ, ಅನುಪ್ಪುರ್ ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದರೂ ಸತ್ನಾದಲ್ಲಿ ಅದರ ಅಭ್ಯರ್ಥಿ ಸೋಲುಂಡಿದ್ದರು.