ಉತ್ತರ ಪ್ರದೇಶ: ಮತದಾರರ ಪಟ್ಟಿಯಲ್ಲಿ ದುರ್ಗಾವತಿ ಸನ್ನಿ ಲಿಯೋನ್ ಆದಾಗ!
ಪಟ್ಟಿಯಲ್ಲಿದೆ ಆನೆ, ಜಿಂಕೆ, ಪಾರಿವಾಳ
ವಾರಣಾಸಿ, ಆ.25: ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ ಪರಿಷ್ಕೃತ ಮತದಾರರ ಪಟ್ಟಿಯಲ್ಲಿ ಬಾಲಿವುಡ್ ನಟಿ ಸನ್ನಿ ಲಿಯೋನ್ ರ ಚಿತ್ರವೊಂದೂ ಕಾಣಿಸಿಕೊಂಡಿದೆ. ಇಲ್ಲಿನ ವಿವೇಕಾನಂದ ಕಾಲನಿ ನಿವಾಸಿ ದುರ್ಗಾವತಿ ಸಿಂಗ್ ಎಂಬ ಮತದಾರೆಯ ಫೋಟೋ ಬದಲು ಸನ್ನಿ ಲಿಯೋನ್ ಫೋಟೋ ಪಟ್ಟಿಯಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದೆ. ಈ ಫೋಟೋ ಹೊರತಾಗಿ ಮತದಾರರ ಪಟ್ಟಿಯಲ್ಲಿ ಹಲವು ಇತರ ಮತದಾರರ ಹೆಸರುಗಳ ಎದುರು ಪಾರಿವಾಳ, ಆನೆ, ಜಿಂಕೆಯ ಚಿತ್ರಗಳೂ ಕಾಣಿಸಿಕೊಂಡು ಅಧಿಕಾರಿಗಳ ಕರ್ತವ್ಯಲೋಪಕ್ಕೆ ಸಾಕ್ಷಿಯಾಗಿವೆ.
ಈ ಪರಿಷ್ಕೃತ ಮತದಾರರ ಪಟ್ಟಿಯನ್ನು ಇತ್ತೀಚೆಗಷ್ಟೇ ಸರಕಾರಿ ವೆಬ್ ಸೈಟ್ ನಲ್ಲಿ ಅಪ್ಲೋಡ್ ಮಾಡಲಾಗಿದ್ದು, ಬಯಲಾಗಿರುವ ಪ್ರಮಾದಗಳ ಬಗ್ಗೆ ಜಿಲ್ಲಾಡಳಿತ ತನಿಖೆಗೆ ಆದೇಶಿಸಿದೆ.
ಮಾಜಿ ಸಚಿವ ನಾರದ್ ರೈ ಅವರ ಹೆಸರಿನ ಎದುರು ಆನೆಯ ಚಿತ್ರವಿದ್ದರೆ ಕನ್ವರ್ ಅಂಕುರ್ ಸಿಂಗ್ ಎಂಬ ಮತದಾರರ ಹೆಸರಿನೆದುರು ಜಿಂಕೆಯ ಚಿತ್ರವಿದೆ. ನಾರದ್ ರೈ ಅವರ ಹೆಸರಿನೆದುರು ಆನೆಯ ಚಿತ್ರವೊಂದನ್ನು ಹೊರತು ಪಡಿಸಿದರೆ ಅವರ ಮನೆ ಸಂಖ್ಯೆ, ವಿಳಾಸ ಮತ್ತಿತರ ಮಾಹಿತಿಗಳು ಸರಿಯಾಗಿವೆ.
ಈ ಪ್ರಮಾದಗಳು ಬೆಳಕಿಗೆ ಬರುತ್ತಿದ್ದಂತೆಯೇ ಜಿಲ್ಲಾ ಚುನಾವಣಾ ಅಧಿಕಾರಿಗಳು ಡಾಟಾ ಎಂಟ್ರಿ ಆಪರೇಟರ್ ವಿಷ್ಣುದೇವ್ ಎಂಬಾತ ಇದರಲ್ಲಿ ಶಾಮೀಲಾಗಿದ್ದಾನೆಂದು ತಿಳಿದು ಆತನನ್ನು ವರ್ಗಾಯಿಸಿದ್ದಾರೆ. ಆತನ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿದೆ.
ಮತದಾರರ ಅಂತಿಮ ಪಟ್ಟಿ ಪ್ರಕಟಗೊಳ್ಳುವ ಮುನ್ನ ತಪ್ಪುಗಳನ್ನು ಸರಿಪಡಿಸಲಾಗಿದೆ. ಪಟ್ಟಿ ಆಗಸ್ಟ್ 15ರಂದು ಹೊರಬೀಳಬೇಕಿದ್ದರೂ ಅದನ್ನೀಗ ಮುಂದೂಡಲಾಗಿದೆ ಎಂದು ಮ್ಯಾಜಿಸ್ಟ್ರೇಟ್ ವಿಶ್ರಾಮ್ ಯಾದವ್ ತಿಳಿಸಿದ್ದಾರೆ.
ಒಟ್ಟು ಎಂಟು ಮತದಾರರ ಫೋಟೋಗಳಿಗೆ ಸಂಬಂಧಿಸಿದಂತೆ ಈ ತಪ್ಪು ನಡೆದಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಮನೋಜ್ ಕುಮಾರ್ ಸಿಂಘಲ್ ತಿಳಿಸಿದ್ದು ಈ ವಿಚಾರವನ್ನು ರಾಜ್ಯ ಚುನಾವಣಾ ಆಯೋಗದ ಗಮನಕ್ಕೂ ತರಲಾಗಿದೆ.