ಇಬ್ಬರು ಬಾಲಕಿಯರ ಮೇಲೆ ಬಾಲಕ ಸಹಿತ ಇಬ್ಬರಿಂದ ಅತ್ಯಾಚಾರ
ಪುಣೆ, ಸೆ. 20: ಇಬ್ಬರು ಬಾಲಕಿಯರ ಮೇಲೆ 17 ವರ್ಷದ ಬಾಲಕ ಸಹಿತ ಇಬ್ಬರು ಅತ್ಯಾಚಾರ ಎಸಗಿದ ಘಟನೆ ಪುಣೆಯಲ್ಲಿ ರವಿವಾರ ನಡೆದಿದೆ. ಅತ್ಯಾಚಾರ ಸಂದರ್ಭ ನಡೆದ ಹಲ್ಲೆಯಲ್ಲಿ ಗಾಯಗೊಂಡಿದ್ದ ಓರ್ವ ಬಾಲಕಿ ಗುರುವಾರ ಮೃತಪಟ್ಟಿದ್ದಾಳೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಪುಣೆಯ ಹಿಂಜವಾಡಿ ಪ್ರದೇಶದ ನಿವಾಸಿಗಳಾದ ಇಬ್ಬರು 12 ವರ್ಷದ ಬಾಲಕಿಯರು ತಮ್ಮ ಮನೆಯ ಸಮೀಪದಲ್ಲಿರುವ ದೇವಾಲಯಕ್ಕೆ ಶನಿವಾರ ಮಧ್ಯಾಹ್ನ ತೆರಳಿದ್ದರು. ಈ ಸಂದರ್ಭ ಅದೇ ಪ್ರದೇಶದ ಈ ಇಬ್ಬರು ಚಾಕಲೇಟು ನೀಡುವುದಾಗಿ ಆಮಿಷ ಒಡ್ಡಿ ಬಾಲಕಿಯರನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ ಎಂದು ಹಿಂಜವಾಡಿ ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ಬಗ್ಗೆ ಯಾರಲ್ಲಾದರೂ ಹೇಳಿದರೆ ಕೊಲೆಗೈಯಲಾಗು ವುದು ಎಂದು ಇಬ್ಬರು ಆರೋಪಿಗಳು ಬಾಲಕಿಯರಿಗೆ ಬೆದರಿಕೆ ಒಡ್ಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಓರ್ವ ಬಾಲಕಿ ಈ ಬಗ್ಗೆ ತನ್ನ ಹೆತ್ತವರಿಗೆ ಮಾಹಿತಿ ನೀಡಲಿಲ್ಲ. ಆದರೆ, ಇನ್ನೋರ್ವ ಬಾಲಕಿ ನೋವು ಹಾಗೂ ನಿಶ್ಯಕ್ತಿ ಉಂಟಾಗುತ್ತಿದೆ ಎಂದು ಹೆತ್ತವರಲ್ಲಿ ತಿಳಿಸಿದ್ದಳು. ಆಕೆಯ ಹೆತ್ತವರು ಆಸ್ಪತ್ರೆಗೆ ಕರೆದೊಯ್ದರು. ಆಸ್ಪತ್ರೆಯಲ್ಲಿ ಬಾಲಕಿಯನ್ನು ವಿಚಾರಣೆ ನಡೆಸಿದಾಗ ನಡೆದ ಘಟನೆಯ ವಿವರ ನೀಡಿದಳು. ಬಾಲಕಿಯ ಹೇಳಿಕೆ ಆಧಾರದಲ್ಲಿ ಪೊಲೀಸರು ಗಣೇಶ್ ನಿಕಮ್ (22) ಹಾಗೂ ಬಾಲಕನ ಮೇಲೆ ಪ್ರಕರಣ ದಾಖಲಿಸಿದ್ದಾರೆ.