ಕೊಳದಲ್ಲಿ ಮೀನು ಹಿಡಿಯುತ್ತಿದ್ದ ಆರು ಮಂದಿ ವಿದ್ಯುತ್ ಆಘಾತಕ್ಕೆ ಬಲಿ
ಗುವಾಹತಿ, ಸೆ. 21: ಕೇಂದ್ರ ಅಸ್ಸಾಂನ ನಾಗಾಂವ್ ಜಿಲ್ಲೆಯ ಉತ್ತರ ಖಟೋವಾಲ್ ಗ್ರಾಮದ ಕೊಳವೊಂದರಲ್ಲಿ ಶುಕ್ರವಾರ ಮೀನು ಹಿಡಿಯುತ್ತಿದ್ದ ಸಂದರ್ಭ ವಿದ್ಯುತ್ ತಂತಿ ಕೆರೆಗೆ ಬಿದ್ದು ವಿದ್ಯುತ್ ಆಘಾತಕ್ಕೆ ಒಳಗಾಗಿ 6 ಮಂದಿ ಮೃತಪಟ್ಟಿದ್ದಾರೆ ಹಾಗೂ 3 ಮಂದಿ ಗಾಯಗೊಂಡಿದ್ದಾರೆ.
‘‘9 ಮಂದಿ ಮೀನು ಹಿಡಿಯುತ್ತಿದ್ದಾಗ ಮೇಲಿದ್ದ ವಿದ್ಯುತ್ ತಂತಿ ತುಂಡಾಗಿ ಕೊಳಕ್ಕೆ ಬಿತ್ತು. ವಿದ್ಯುತ್ ಆಘಾತಕ್ಕೆ ಒಳಗಾದ ಮೂರು ಮಂದಿ ಸ್ಥಳದಲ್ಲೇ ಮೃತಪಟ್ಟರು ಹಾಗೂ ಇತರ ಮೂವರು ಆಸ್ಪತ್ರೆಗೆ ಕೊಂಡೊಯ್ಯುತ್ತಿರುವ ಮಾರ್ಗ ಮಧ್ಯೆ ಮೃತಪಟ್ಟರು’’ ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಗಾಯಗೊಂಡ ಇತರ ಮೂವರನ್ನು ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಘಟನೆಯಿಂದ ಆಕ್ರೋಶಿತರಾದ ಗ್ರಾಮಸ್ಥರ ಗುಂಪೊಂದು ವಿದ್ಯುತ್ ಇಲಾಖೆಯ ಉದ್ಯೋಗಿಗಳ ಮನೆಗಳ ಮೇಲೆ ದಾಳಿ ಮಾಡಿ ಹಾನಿ ಎಸಗಿತು. ಮುಖ್ಯಮಂತ್ರಿ ಸರ್ಬಾನಂದ ಸೋನೋವಾಲ್ ಘಟನೆಯ ತನಿಖೆಗೆ ಆದೇಶಿಸಿದ್ದಾರೆ.
Next Story