ಶೌಚಾಲಯ ಎಂದುಕೊಂಡು ವಿಮಾನದ ನಿರ್ಗಮನ ಬಾಗಿಲು ತೆರೆಯಲು ಮುಂದಾದ ಪ್ರಯಾಣಿಕ!
ಪಾಟ್ನಾ, ಸೆ.26: ಮೊದಲ ಬಾರಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬ ಶೌಚಾಲಯದ ಬಾಗಿಲು ಎಂದು ತಪ್ಪಾಗಿ ತಿಳಿದು ವಿಮಾನದ ನಿರ್ಗಮನ ದ್ವಾರವನ್ನು ತೆರೆಯಲು ಯತ್ನಿಸಿ ವಿಮಾನದಲ್ಲಿ ಆತಂಕದ ವಾತಾವರಣ ಸೃಷ್ಟಿಸಿದ ಘಟನೆ ನಡೆದಿದೆ. ನಗರದ ಕಂಕರಬಾಘ್ ಪ್ರದೇಶದ ಈ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ವಿಚಾರಣೆ ವೇಳೆಯೂ ಪ್ರಯಾಣಿಕ ತಾನು ತಪ್ಪಿ ನಿರ್ಗಮನ ದ್ವಾರ ತೆರೆಯಲು ಯತ್ನಿಸಿದೆ ಎಂಬುದನ್ನು ಸ್ಪಷ್ಟಪಡಿಸಿದ್ದಾನೆ. ಆತ ತಾನೊಬ್ಬ ಬ್ಯಾಂಕ್ ಅಧಿಕಾರಿ ಹಾಗೂ ಅಜ್ಮೀರ್ ನಲ್ಲಿ ಕಾರ್ಯನಿರ್ವಹಿಸುತ್ತಿರುವುದಾಗಿ ತಿಳಿಸಿದ್ದ. ಆತ ದಿಲ್ಲಿಯಿಂದ ಪಾಟ್ನಾಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ವಿಮಾನ ನಿಲ್ದಾಣದ ಪೊಲೀಸ್ ಠಾಣಾಧಿಕಾರಿ ಮುಹಮ್ಮದ್ ಸನೋವರ್ ಖಾನ್ ತಿಳಿಸಿದ್ದಾರೆ.
ಪ್ರಯಾಣಿಕನಿಂದ ಬಾಂಡ್ ಗೆ ಸಹಿ ಹಾಕಿಸಿ ಆತನನ್ನು ಬಿಡುಗಡೆಗೊಳಿಸಲಾಗಿದೆ. ಆತ ಈ ಕೃತ್ಯವನ್ನು ಯಾವುದೇ ಕೆಟ್ಟ ಉದ್ದೇಶದಿಂದ ಮಾಡಿದ್ದಾನೆಂಬುದಕ್ಕೆ ಯಾವುದೇ ಪುರಾವೆಯಿಲ್ಲ ಎಂದೂ ಪೊಲೀಸರು ಹೇಳಿದ್ದಾರೆ.
Next Story