ವಿಧಾನ ಸಭೆ ಚುನಾವಣೆ: ರಾಜಸ್ಥಾನದಲ್ಲಿ ಕಾಂಗ್ರೆಸ್ ಜಯಭೇರಿ ಎಂದ ಸಿ-ವೋಟರ್ ಸಮೀಕ್ಷೆ
ಹೊಸದಿಲ್ಲಿ, ಅ. 7: ಮುಂಬರುವ ವಿಧಾನ ಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್ ರಾಜಸ್ಥಾನದಲ್ಲಿ ಜಯಭೇರಿ ಭಾರಿಸಲಿದೆ. ಮದ್ಯಪ್ರದೇಶ ಹಾಗೂ ಚತ್ತೀಸ್ಗಢದಲ್ಲಿ ಬಿಜೆಪಿಗೆ ತೀವ್ರ ಪೈಪೋಟಿ ನೀಡಲಿದೆ ಎಂದು ಚುನಾವಣಾ ಪೂರ್ವ ಸಮೀಕ್ಷೆ ಹೇಳಿದೆ.
ಪ್ರಸ್ತುತ ಈ ಎಲ್ಲ ರಾಜ್ಯಗಳು ಬಿಜೆಪಿಯ ನಿಯಂತ್ರಣದಲ್ಲಿದೆ. ಕಾಂಗ್ರೆಸ್ ರಾಜಸ್ಥಾನದಲ್ಲಿ 200 ಸ್ಥಾನಗಳಲ್ಲಿ 142 ಸ್ಥಾನಗಳನ್ನು ಗಳಿಸಲಿದೆ. ಮದ್ಯಪ್ರದೇಶದಲ್ಲಿ 230 ಸ್ಥಾನಗಳಲ್ಲಿ 122 ಸ್ಥಾನಗಳನ್ನು ಪಡೆಯಲಿದೆ. ಚತ್ತೀಸ್ಗಢದಲ್ಲಿ 90 ಸ್ಥಾನಗಳಲ್ಲಿ 47 ಸ್ಥಾನಗಳನ್ನು ಪಡೆಯಲಿದೆ ಎಂದು ಎಬಿಪಿ ನ್ಯೂಸ್ಗಾಗಿ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದ ಸಿ-ವೋಟರ್ ಹೇಳಿದೆ.
ಎಲ್ಲ ಮೂರು ರಾಜ್ಯಗಳಲ್ಲಿ ನಿರುದ್ಯೋಗಕ್ಕೆ ಚುನಾವಣಾ ಪ್ರಚಾರದಲ್ಲಿ ಪ್ರಧಾನ ಆದ್ಯತೆ ಸಿಗಲಿದೆ. ರಾಜಸ್ಥಾನ ಹಾಗೂ ಮಧ್ಯಪ್ರದೇಶದಲ್ಲಿ ನೀರು ಪೂರೈಕೆ ಪ್ರಮುಖ ವಿಷಯವಾಗಲಿದೆ. ಚತ್ತೀಸ್ಗಢದಲ್ಲಿ ರಸ್ತೆ ಸಮಸ್ಯೆ ಪ್ರಧಾನ ವಸ್ತುವಾಗಲಿದೆ.
ಎಲ್ಲ ಮೂರು ರಾಜ್ಯಗಳಲ್ಲಿ ಕೇಂದ್ರ ಸರಕಾರ ಅಥವಾ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬದಲಾಯಿಸಲು ಶೇ. 50 ಜನರು ಬಯಸಿಲ್ಲ ಎಂದು ಸಿ-ವೋಟರ್-ಎಬಿಪಿ ನ್ಯೂಸ್ ತಿಳಿಸಿದೆ.