ಕಿರುತೆರೆ ನಟಿಯ ಅತ್ಯಾಚಾರ ಎಸಗಿದ ಬಾಲಿವುಡ್ನ "ಸಂಸ್ಕಾರವಂತ" ನಟ ಯಾರು?
ಹೊಸದಿಲ್ಲಿ, ಅ.9: ಬಾಲಿವುಡ್ನಲ್ಲಿ ಲೈಂಗಿಕ ಶೋಷಣೆ ನಡೆಯುತ್ತಿದೆ ಎಂಬ ಆರೋಪಗಳು ಪುಂಖಾನುಪುಂಖವಾಗಿ ಬರುತ್ತಿರುವ ನಡುವೆಯೇ 1990ರ ದಶಕದ ಅತ್ಯಂತ ಜನಪ್ರಿಯ ಟಿವಿ ಶೋ "ತಾರಾ"ದ ನಾಯಕಿನಟಿಯ ಮೇಲೆ ಬಾಲಿವುಡ್ನ "ಅತ್ಯಂತ ಸಂಸ್ಕಾರವಂತ ನಟ" ಅತ್ಯಾಚಾರ ಎಸಗಿದ್ದಾರೆ ಎಂದು ಚಿತ್ರ ನಿರ್ಮಾಪಕಿ ವಿಂತಾ ನಂದ ಆರೋಪಿಸಿದ್ದಾರೆ.
"ಈ ಬಗ್ಗೆ ದೂರು ನೀಡಿದ್ದಕ್ಕಾಗಿ ನನ್ನನ್ನು ಕಿತ್ತೆಸೆಯಲಾಯಿತು" ಎಂದು ನಂದಾ ಹೇಳಿದ್ದಾರೆ. ಚಾನೆಲ್ನಲ್ಲಿ ತನ್ನ ಎಲ್ಲ ಶೋ ನಿಲ್ಲಿಸುವಂತೆ ಆತ ಪ್ರಭಾವ ಬೀರಿದ ಪರಿಣಾಮ ತನ್ನ ನಿರ್ಮಾಣ ಕಂಪೆನಿ ಮುಚ್ಚಬೇಕಾಯಿತು ಎಂದು ಹೇಳಿಕೊಂಡಿದ್ದಾರೆ.
ನಟಿಯ ಮೇಲೆ ಹೇಗೆ ಅತ್ಯಾಚಾರ ಎಸಗಿ ಹೇಗೆ ದೌರ್ಜನ್ಯ ಎಸಲಾಯಿತು ಹಾಗೂ ಇದು ತಮಗೆ ಹೇಗೆ ಆಘಾತ ತಂದಿತು ಎನ್ನುವುದನ್ನು ನಂದಾ ಫೇಸ್ಬುಕ್ ಪೋಸ್ಟ್ನಲ್ಲಿ ವಿವರಿಸಿದ್ದಾರೆ. ಆ ನಟನ ಪತ್ನಿ ತನ್ನ ಆತ್ಮೀಯ ಸ್ನೇಹಿತೆಯಾಗಿದ್ದು, ಹಲವು ವರ್ಷಗಳ ಕಾಲ ನಮ್ಮದೇ ವರ್ತುಲದಲ್ಲಿ ಇದ್ದವರು ಎಂದವರು ಬಹಿರಂಗಪಡಿಸಿದ್ದಾರೆ.
ಟ್ವಿಟ್ಟರ್ನಲ್ಲಿ ಮಲ್ಲಿಕಾ ದುವಾ ಸೇರಿದಂತೆ ಹಲವರು ನಂದಾ ಅವರ ಪೋಸ್ಟ್ ಶೇರ್ ಮಾಡಿದ್ದು, ಈ ನಟನನ್ನು ಅಲೋಕ್ನಾಥ್ ಎಂದು ಬಹಿರಂಗಪಡಿಸಿದ್ದಾರೆ. ಹಲವು ಬಾಲಿವುಡ್ ಕೌಟುಂಬಿಕ ಚಿತ್ರಗಳಲ್ಲಿ ಇವರು ಪೋಷಕ ಪಾತ್ರವನ್ನು ನಿರ್ವಹಿಸಿದ್ದರು.
"ತಾರಾ ಧಾರಾವಾಹಿ ನಿರ್ಮಿಸುತ್ತಿದ್ದ ವೇಳೆ, ಆತ ನಾಯಕಿ ನಟಿಯ ಹಿಂದೆ ಬಿದ್ದಿದ್ದ. ಆತನ ಜತೆ ಸಹಕರಿಸಲು ನಿರಾಕರಿಸಿದರೂ, ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ" ಎಂದು ನಂದಾ ವಿವರಿಸಿದ್ದಾರೆ.
ಬಳಿಕ ಒಂದು ಪಾರ್ಟಿಯಲ್ಲಿ ನಮಗೆ ಮದ್ಯಪಾನ ಮಾಡಿಸಿ ನಮ್ಮನ್ನು ಡ್ರಾಪ್ ಮಾಡುವುದಾಗಿ ಹೇಳಿದ. ನನ್ನ ಮೇಲೆ ಅತ್ಯಾಚಾರ ನಡೆದಿಲ್ಲವಾದರೂ, ಆಕೆಯ ಮೇಲೆ ದೌರ್ಜನ್ಯ ನಡೆಸಿದ್ದ. ಆದರೆ ಆ ಬಳಿಕ ಹೇಗೆ ಕಿರುಕುಳ ನೀಡಿ ಅವಮಾನಿಸಿದ ಎನ್ನುವುದನ್ನು ವಿವರಿಸಿದ್ದಾರೆ.