ಲೈಂಗಿಕ ಕಿರುಕುಳ ಆರೋಪಗಳಿಗೆ ವೈರಮುತ್ತು ಪ್ರತಿಕ್ರಿಯೆ
ಚೆನ್ನೈ,ಅ.10: ಖ್ಯಾತ ಗಾಯಕಿ ಚಿನ್ಮಯಿ ಸೇರಿದಂತೆ ಹಲವು ಮಹಿಳೆಯರು ತನ್ನ ವಿರುದ್ಧ ಮಾಡಿರುವ ಲೈಂಗಿಕ ದೌರ್ಜನ್ಯ ಆರೋಪದ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿ ಹೇಳಿಕೆ ನೀಡಿರುವ ಗೀತೆ ರಚನೆಕಾರ, ಸಾಹಿತಿ ವೈರಮುತ್ತು, ಸಮಯವೇ ಎಲ್ಲ ನಿಜಾಂಶವನ್ನೂ ಬಯಲು ಮಾಡುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ವೈರಮುತ್ತು, ಪ್ರಸಿದ್ಧ ವ್ಯಕ್ತಿಗಳ ವಿರುದ್ಧ ಆರೋಪ ಮಾಡುವುದು ಈಗಿನ ಟ್ರೆಂಡ್ ಆಗಿದೆ ಎಂದು ತಿಳಿಸಿದ್ದಾರೆ. “ನಾನು ಇತ್ತೀಚಿನ ದಿನಗಳಲ್ಲಿ ಎದುರಿಸುತ್ತಿರುವ ಅವಮಾನಗಳಲ್ಲಿ ಇದೂ ಒಂದಾಗಿದೆ. ಸಮಯವೇ ಸತ್ಯವನ್ನು ವಿವರಿಸಲಿದೆ” ಎಂದು ಅವರು ಟ್ವಿಟರ್ನಲ್ಲಿ ತಿಳಿಸಿದ್ದಾರೆ. ವೈರಮುತ್ತು ಹೇಳಿಕೆಗೆ ತಿರುಗೇಟು ನೀಡಿರುವ ಚಿನ್ಮಯಿ, ಆತನೊಬ್ಬ ಸುಳ್ಳುಗಾರ ಎಂದು ಕಿಡಿಕಾರಿದ್ದಾರೆ.
ವೈರಮುತ್ತು ತಮ್ಮ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಹಲವು ಮಹಿಳೆಯರು ಆರೋಪಿಸಿದ್ದಾರೆ. ಆತ ತನ್ನನ್ನು ಬಿಗಿದಪ್ಪಿ ಮುತ್ತು ನೀಡಿದ್ದಾನೆ ಎಂದು ಓರ್ವ ಮಹಿಳೆ ಆರೋಪಿಸಿದ್ದರೆ, ಆತನ ಕೋಣೆಯ ಬಾಗಿಲು ಮುಚ್ಚಿ ನನ್ನನ್ನು ಸ್ಪರ್ಶಿಸಿರುವುದಾಗಿ ಇನ್ನೋರ್ವ ಮಹಿಳೆ ಆರೋಪಿಸಿದ್ದಾರೆ.