ನೆಸ್ ವಾಡಿಯಾ ವಿರುದ್ಧ ಪ್ರೀತಿ ಝಿಂಟಾ ದಾಖಲಿಸಿದ ಲೈಂಗಿಕ ಕಿರುಕುಳ ಪ್ರಕರಣ ಕೈಬಿಟ್ಟ ಹೈಕೋರ್ಟ್
ಹೊಸದಿಲ್ಲಿ, ಅ. 10: ಉದ್ಯಮಿ ನೆಸ್ ವಾಡಿಯಾ ವಿರುದ್ಧ ನಟಿ ಪ್ರೀತಿ ಝಿಂಟಾ 2014ರಲ್ಲಿ ದಾಖಲಿಸಿದ ಲೈಂಗಿಕ ಕಿರುಕುಳದ ಪ್ರಕರಣವನ್ನು ಬಾಂಬೈ ಉಚ್ಚ ನ್ಯಾಯಾಲಯ ಬುಧವಾರ ರದ್ದುಗೊಳಿಸಿದೆ. ಪ್ರಕರಣವನ್ನು ಮುಗಿಸುವ ಬಗ್ಗೆ ಪರಿಶೀಲಿಸುವಂತೆ ನಟಿಗೆ ಸಲಹೆ ನೀಡಿದ ಎರಡು ದಿನಗಳ ಬಳಿಕ ನ್ಯಾಯಾಲಯ ಈ ನಿರ್ಧಾರ ತೆಗೆದುಕೊಂಡಿದೆ.
ಒಂದು ವೇಳೆ ನೆಸ್ ವಾಡಿಯಾ ಕ್ಷಮೆ ಕೋರಿದರೆ ವಿವಾದವನ್ನು ಮುಗಿಸಲು ನಟಿ ಆಸಕ್ತಿ ಹೊಂದಿರುವುದಾಗಿ ಪ್ರೀತಿ ಝಿಂಟಾ ಪರ ವಕೀಲ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಅದಾಗ್ಯೂ, ನೆಸ್ ವಾಡಿಯಾ ಅವರು ಕ್ಷಮೆ ಕೋರಲು ಸಿದ್ಧರಿಲ್ಲ ಎಂದು ನೆಸ್ ವಾಡಿಯಾ ಅವರ ವಕೀಲ ಹೇಳಿದ್ದಾರೆ. ಪ್ರಕರಣವನ್ನು ಕೈಬಿಡುವಂತೆ ಕೋರಿ ನೆಸ್ ವಾಡಿಯಾ ಸಲ್ಲಿಸಿದ ಮನವಿಯ ವಿಚಾರಣೆ ನಡೆಸಿದ ನ್ಯಾಯಾಲಯ, ವಿವಾದವನ್ನು ಪರಿಹರಿಸುವಂತೆ ಎರಡೂ ಕಡೆಯವರಿಗೆ ಸಲಹೆ ನೀಡಿದ್ದರು. ಈಗ ಅದನ್ನು ಮುಗಿಸಿ ಎಂದು ನ್ಯಾಯಮೂರ್ತಿ ರಂಜಿತ್ ಮೋರೆ ಸೋಮವಾರ ಹೇಳಿದ್ದಾರೆ.
Next Story