ನಾನಾ ಪಾಟೇಕರ್ ಮಂಪರು ಪರೀಕ್ಷೆಗೆ ತನುಶ್ರೀ ಒತ್ತಾಯ
ಮುಂಬೈ, ಅ. 14: ಖ್ಯಾತ ಬಾಲಿವುಡ್ ನಟ ನಾನಾ ಪಾಟೇಕರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಿ, ದೇಶದಲ್ಲಿ 'ಮೀ ಟೂ' ಚಳವಳಿಗೆ ನಾಂದಿ ಹಾಡಿದ ನಟಿ ತನುಶ್ರೀ ದತ್ತಾ, ನಾನಾ ಪಾಟೇಕರ್ ಸೇರಿದಂತೆ ಎಲ್ಲ ಅರೋಪಿಗಳನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು ಎಂಬ ಹೊಸ ಬೇಡಿಕೆ ಮುಂದಿಟ್ಟಿದ್ದಾರೆ.
ಮಂಪರು ಪರೀಕ್ಷೆ ನಡೆಸಲು ಸೂಚಿಸುವಂತೆ ದತ್ತಾ ಅವರ ವಕೀಲ ನಿತಿನ್ ಸಾತಪುತೆ ಅವರು ಮುಂಬೈನ ಒಶಿವರ ಪೊಲೀಸ್ ಠಾಣೆಯಲ್ಲಿ ಶನಿವಾರ ಅರ್ಜಿ ಸಲ್ಲಿಸಿದ್ದಾರೆ.
ನಟ ನಾನಾ ಪಾಟೇಕರ್, ಕೊರಿಯೊಗ್ರಾಫರ್ ಗಣೇಶ್ ಆಚಾರ್ಯ, ನಿರ್ಮಾಪಕ ಸಮೀ ಸಿದ್ದಿಕಿ ಮತ್ತು ನಿರ್ದೇಶಕ ರಾಕೇಶ್ ಸಾರಂಗ್ ಅವರನ್ನು ನಾರ್ಕೊ ಅನಾಲಿಸಿಸ್, ಬ್ರೈನ್ ಮ್ಯಾಪಿಂಗ್ ಹಾಗೂ ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಬೇಕು ಎಂದು ಕೋರಿದ್ದಾರೆ.
ಹತ್ತು ವರ್ಷಗಳ ಹಿಂದೆ ಹಿಂದಿ ಚಿತ್ರ "ಹಾರ್ನ್ ಓಕೆ ಪ್ಲೀಸ್"ನ ಹಾಡು ಚಿತ್ರೀಕರಣದ ಸಂದರ್ಭದಲ್ಲಿ ಪಾಟೇಕರ್ ಅಸಭ್ಯವಾಗಿ ನಡೆದು ಕೊಂಡಿದ್ದರು ಎಂದು 67ರ ಹಿರಿಯ ನಟನ ವಿರುದ್ಧ ತನುಶ್ರೀ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಕರಣದಲ್ಲಿ ನಕಲಿ ಸಾಕ್ಷಿಗಳಾಗಲು ಸಜ್ಜಾಗಿರುವ ಎಲ್ಲ ಆರೋಪಿಗಳನ್ನು ಬಂಧಿಸುವಂತೆಯೂ ಅವರು ಅಗ್ರಹಿಸಿದ್ದಾರೆ.