6 ತಿಂಗಳ ಮಗುವಿನ ಜೊತೆ ಕರ್ತವ್ಯಕ್ಕೆ ಹಾಜರಾದ ಮಹಿಳಾ ಪೊಲೀಸ್
ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರಶಂಸೆ
ಝಾನ್ಸಿ, ಅ.28: ಇಲ್ಲಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುವ ಅರ್ಚನಾ ಜಯಂತ್ ಅವರಿಗೆ ಅದು ಮಾಮೂಲಿ ದಿನವಾಗಿತ್ತು. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಅವರು ಶ್ಲಾಘನೆಗೆ ಪಾತ್ರರಾಗಿದ್ದರು. ಹಲವು ಮಂದಿ ಆಕೆಗೆ ಉತ್ತಮ ಸೌಲಭ್ಯ ಕಲ್ಪಿಸಿಕೊಡುವಂತೆ ಮೇಲಧಿಕಾರಿಗಳನ್ನು ಆಗ್ರಹಿಸಿದ್ದರು. ಪುಟ್ಟ ಮಗುವಿನ ಪಾಲನೆ ಮಾಡಿಕೊಂಡು ಕರ್ತವ್ಯ ನಿಭಾಯಿಸುತ್ತಿರುವ ಅವರ ಫೋಟೊ ಟ್ವಿಟರ್ನಲ್ಲಿ ವೈರಲ್ ಆಗಿತ್ತು. ತಕ್ಷಣ ಸ್ಪಂದಿಸಿದ ಉತ್ತರ ಪ್ರದೇಶ ಪೊಲೀಸ್ ಇಲಾಖೆ, ಪೊಲೀಸ್ ಠಾಣೆಯಲ್ಲಿ ಶಿಶುವಿಹಾರ ವ್ಯವಸ್ಥೆ ಮಾಡುವ ಸಾಧ್ಯತೆಯನ್ನು ಪರಿಶೀಲಿಸುವುದಾಗಿ ಪ್ರಕಟಿಸಿದೆ.
ಉತ್ತರ ಪ್ರದೇಶದ ಹಿರಿಯ ಪೊಲೀಸ್ ಅಧಿಕಾರಿ ರಾಹುಲ್ ಶ್ರೀವಾಸ್ತವ, "ಮೀಟ್ ಮದರ್ ಕಾಪ್ ಅರ್ಚನಾ, ಪೋಸ್ಟೆಡ್ ಅಟ್ ಕೊತ್ವಾಲಿ, ಝಾನ್ಸಿ.." ಎಂದು ಟ್ವೀಟ್ ಮಾಡಿದ್ದರು. ತನ್ನ ಮಾತೃತ್ವದ ಕರ್ತವ್ಯ ಮತ್ತು ಇಲಾಖೆಯ ಕರ್ತವ್ಯವನ್ನು ಜತೆಜತೆಗೆ ನಿಭಾಯಿಸುತ್ತಿರುವ ಅವರಿಗೆ ಸೆಲ್ಯೂಟ್ ಹೇಳಲೇಬೇಕು ಎಂದವರು ಟ್ವೀಟಿಸಿದ್ದರು.
ಜಯಂತ್ ಅವರ ಆರು ತಿಂಗಳ ಮಗು ಆನಿಕಾಗಳನ್ನು ಕೂಡಾ ಠಾಣೆಗೆ ಬರುವಾಗ ಕರೆತರುತ್ತಾರೆ. ಸಾಮಾನ್ಯವಾಗಿ ತಾಯಿಯ ಕೆಲಸದ ಮೇಜಿನಲ್ಲೇ ನಿದ್ದೆ ಹೋಗುತ್ತದೆ. ಈ ಬಗೆಗಿನ ವರದಿಯನ್ನು ಸ್ಥಳೀಯ ಮಾಧ್ಯಮಗಳಲ್ಲಿ ನೋಡಿದ ಅಧಿಕಾರಿ, ಈ ತಾಯಿ ಪೊಲೀಸ್ನ ಈ ಕರ್ತವ್ಯ ಪ್ರಜ್ಞೆಯನ್ನು ಶ್ಲಾಘಿಸಿ 1000 ರೂಪಾಯಿ ಬಹುಮಾನ ಘೋಷಿಸಿದ್ದಾರೆ.
ಕರ್ತವ್ಯ ನಿರ್ವಹಿಸುವ ಮಾತೆಯರಿಗೆ ಉತ್ತಮ ಸೌಲಭ್ಯ ಒದಗಿಸುವಂತೆ ಟ್ವಿಟ್ಟರ್ ಬಳಕೆದಾರರು ಒತ್ತಾಯಿಸಿದ್ದಾರೆ. “ಇದು ಈ ಸಾಹಸಿ ತಾಯಿಗೆ ಸೆಲ್ಯೂಟ್ ಮಾಡುವ ಸಮಯವಲ್ಲ; ಅವರಿಗೆ ಶಿಶುವಿಹಾರ ಕಲ್ಪಿಸಿ" ಎಂದು ಆಗ್ರಹಿಸಿದ್ದಾರೆ.