ಮಾಯಾವತಿ ಪ್ರಧಾನಿ, ನಾನು ಛತ್ತೀಸ್ಗಢ ಸಿಎಂ ಎಂದ ಅಜಿತ್ ಜೋಗಿ
ರಾಯ್ಪುರ, ನ.9: ಮುಂದಿನ ವರ್ಷಾರಂಭದಲ್ಲಿ ನಡೆಯಲಿರುವ ಛತ್ತೀಸ್ಗಢ ವಿಧಾನಸಭೆ ಚುನಾವಣೆಯ ಬಳಿಕ ರಾಜ್ಯದಲ್ಲಿ ತಾನು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತೇನೆ ಎಂದು ಕಾಂಗ್ರೆಸ್ ಬಂಡಾಯ ನಾಯಕ, ಛತ್ತೀಸ್ಗಢ ಮಾಜಿ ಮುಖ್ಯಮಂತ್ರಿ ಅಜಿತ್ ಜೋಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ಪ್ರಧಾನಿ ಮಂತ್ರಿ ಹುದ್ದೆಗೆ ಬಹುಜನ ಸಮಾಜವಾದಿ ಪಕ್ಷ(ಬಿಎಸ್ಪಿ)ದ ನಾಯಕಿ ಮಾಯಾವತಿ ಅತ್ಯಂತ ಸೂಕ್ತ ವ್ಯಕ್ತಿ ಎಂದವರು ಅಭಿಪ್ರಾಯಪಟ್ಟಿದ್ದಾರೆ. ಛತ್ತೀಸ್ಗಢದ ಪ್ರಪ್ರಥಮ ಮುಖ್ಯಮಂತ್ರಿಯಾಗಿದ್ದ ಅಜಿತ್ ಜೋಗಿ , ಸುಮಾರು ಮೂರು ದಶಕಗಳ ಕಾಲ ಕಾಂಗ್ರೆಸ್ನಲ್ಲಿದ್ದು ಬಳಿಕ ಪಕ್ಷದ ವಿರುದ್ಧ ಬಂಡೆದ್ದು ನೂತನ ಪಕ್ಷ ಸ್ಥಾಪಿಸಿದ್ದರು. ಎಡಪಕ್ಷಗಳು ಹಾಗೂ ಬಿಎಸ್ಪಿಯೊಂದಿಗೆ ನಾವು ಮೈತ್ರಿ ಮಾಡಿಕೊಂಡಿದ್ದೇವೆ. ನಾನೇ ಮುಖ್ಯಮಂತ್ರಿ ಎಂದು ನಿರ್ಧರಿಸಲಾಗಿದೆ ಎಂದು ಜೋಗಿ ತಿಳಿಸಿದ್ದಾರೆ.
ಕಾಂಗ್ರೆಸ್ಸೇತರ ಹಾಗೂ ಬಿಜೆಪಿಯೇತರ ಮೈತ್ರಿಕೂಟ 2019ರ ಲೋಕಸಭಾ ಚುನಾವಣೆಯಲ್ಲಿ ಬಹುಮತ ಗಳಿಸಲಿದೆ ಎಂದು ನನಗೆ ಈ ಹಿಂದಿನಿಂದಲೂ ವಿಶ್ವಾಸವಿದೆ. ಪ್ರಧಾನಿ ಯಾರಾಗಬೇಕು ಎಂದು ಆ ಬಳಿಕ ನಿರ್ಧರಿಸಲಾಗುವುದು. ಆದರೆ ವೈಯಕ್ತಿಕವಾಗಿ ಹೇಳುವುದಾದರೆ ಮಾಯಾವತಿ ಸೂಕ್ತ ಅಭ್ಯರ್ಥಿ. ಪ್ರಥಮವಾಗಿ ದಲಿತ ವರ್ಗದವರು, ಮಹಿಳೆ, ಉತ್ತರಪ್ರದೇಶದ ರಾಜಕಾರಣಿ, ನಾಲ್ಕು ಬಾರಿಯ ಮುಖ್ಯಮಂತ್ರಿ - ಈ ಎಲ್ಲಾ ಅರ್ಹತೆ ಹೊಂದಿರುವ ಮಾಯಾವತಿ ಮುಂದಿನ ಪ್ರಧಾನಿಯಾಗುತ್ತಾರೆ ಎಂಬ ವಿಶ್ವಾಸವಿದೆ ಎಂದು ಜೋಗಿ ಹೇಳಿದ್ದಾರೆ.
ಐಪಿಎಸ್(ಇಂಡಿಯನ್ ಪೊಲೀಸ್ ಸರ್ವಿಸ್), ಐಎಎಸ್(ಇಂಡಿಯನ್ ಅಡ್ಮಿನಿಸ್ಟ್ರೇಟಿವ್ ಸರ್ವಿಸ್) ಅಧಿಕಾರಿಯಾಗಿರುವ ಜೋಗಿ 1986ರಲ್ಲಿ ರಾಜ್ಯ ಸಭಾ ಸದಸ್ಯನಾಗಿ ಆಯ್ಕೆಯಾಗಿದ್ದರು. 2000ರಲ್ಲಿ ಛತ್ತೀಸ್ಗಢದ ಪ್ರಥಮ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು. 2016ರಲ್ಲಿ ಕಾಂಗ್ರೆಸ್ ಪಕ್ಷವನ್ನು ತ್ಯಜಿಸಿ, ಸ್ವಂತ ಪಕ್ಷ ಸ್ಥಾಪಿಸಿದ್ದರು.