65,000 ಕೋ.ರೂ.ವೆಚ್ಚದಲ್ಲಿ ಮುಂಬೈ ಲೋಕಲ್ ರೈಲು ವ್ಯವಸ್ಥೆಗೆ ಕಾಯಕಲ್ಪ: ಗೋಯಲ್
ಮುಂಬೈ,ನ.11: ಮುಂಬೈ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉಪನಗರ ರೈಲುಜಾಲದಲ್ಲಿ ಹಲವಾರು ರೈಲ್ವೆ ಮೂಲಸೌಕರ್ಯ ಯೋಜನೆಗಳಿಗಾಗಿ 65,000 ಕೋ.ರೂ.ವರೆಗೆ ವೆಚ್ಚದ ಪ್ರಸ್ತಾವಕ್ಕೆ ಅನುಮತಿ ನೀಡಲಾಗಿದೆ ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು ರವಿವಾರ ಇಲ್ಲಿ ತಿಳಿಸಿದರು.
ಈ ವರ್ಷದ ಕೇಂದ್ರ ಮುಂಗಡಪತ್ರದಲ್ಲಿ ಹೂಡಿಕೆಗಳನ್ನು ಪ್ರಸ್ತಾಪಿಸಲಾಗಿದ್ದ ಈ ಯೋಜನೆಗಳು ಮುಂಬೈ ಮಹಾನಗರದ ಜೀವನಾಡಿಯಾಗಿರುವ ಲೋಕಲ್ ರೈಲು ವ್ಯವಸ್ಥೆಯಲ್ಲಿ ಹೊಸ ಕಾಮಗಾರಿಗಳು ಮತ್ತು ಹಾಲಿ ಸೌಲಭ್ಯಗಳ ಉನ್ನತೀಕರಣವನ್ನು ಒಳಗೊಂಡಿವೆ ಎಂದ ಅವರು,ಸಾರಿಗೆ ಮತ್ತು ಪ್ರಯಾಣಿಕ ಸೌಲಭ್ಯಗಳನ್ನು ಉತ್ತಮಗೊಳಿಸಲಿರುವ ಈ ಮೂಲಸೌಕರ್ಯ ಯೋಜನೆಗಳನ್ನು ಮಹಾರಾಷ್ಟ್ರ ಸರಕಾರವು ಸಕ್ರಿಯವಾಗಿ ಬೆಂಬಲಿಸುತ್ತಿದೆ ಎಂದರು.
ರೈಲ್ವೆ ಇಲಾಖೆಯು ಮೂಲಸೌಕರ್ಯ ಮತ್ತು ಸಾರ್ವಜನಿಕ ಸೌಲಭ್ಯ ಕಾಮಗಾರಿಗಳನ್ನು ನಡೆಸುತ್ತಿರುವ ವೇಗವನ್ನು ಪರಿಗಣಿಸಿದರೆ ಮುಂದಿನ ನಾಲ್ಕು-ನಾಲ್ಕೂವರೆ ವರ್ಷಗಳಲ್ಲಿ ಬೃಹನ್ಮುಂಬೈ ಉಪನಗರ ರೈಲುಜಾಲವು ಸಂಪೂರ್ಣವಾಗಿ ರೂಪಾಂತರಗೊಳ್ಳುವ ನಂಬಿಕೆ ತನಗಿದೆ ಎಂದರು.
ಗೋಯಲ್ ನವಿಮುಂಬೈನ ಖಾರ್ಕೋಪರ್ ರೈಲ್ವೆ ನಿಲ್ದಾಣದಲ್ಲಿ 12 ಕಿ.ಮೀ.ಉದ್ದದ ಹೊಸ ನೆರುಲ್-ಸೀವುಡ್ಸ್ ದರಾವೆ-ಬೇಲಾಪುರ-ಖಾರ್ಕೋಪರ್ ಉಪನಗರ ರೈಲು ಮಾರ್ಗವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಇದು ಮಧ್ಯ ರೈಲ್ವೆಯ ಹಾರ್ಬರ್ ವಿಭಾಗದಲ್ಲಿ 27 ಕಿ.ಮೀ.ಉದ್ದದ ನೆರುಲ್-ಬೇಲಾಪುರ-ಉರನ್ ಲೋಕಲ್ ರೈಲು ಮಾರ್ಗದ ಮೊದಲ ಹಂತವಾಗಿದೆ.
ವಸಯಿ ರೋಡ್-ದಿವಾ-ಪನ್ವೇಲ್-ಪೇಣ್ ನಡುವೆ ಎಂಟು ಮೇನ್ಲೈನ್ ಇಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್(ಎಂಇಎಂಯು)ಗಳ ಸೇರ್ಪಡೆಗೆ ಮತ್ತು ಇತರ ಪ್ರಯಾಣಿಕ ಸೌಲಭ್ಯಗಳಿಗೂ ಅವರು ಚಾಲನೆ ನೀಡಿದರು.