ಮೋದಿ ಭಾಷಣದ ವಿರುದ್ಧ ಕಾಂಗ್ರೆಸ್ ನಿಂದ ಚುನಾವಣಾ ಆಯೋಗಕ್ಕೆ ದೂರು
ಭೋಪಾಲ್, ನ.19: ಕಾಂಗ್ರೆಸ್ ಮುಖಂಡರೊಬ್ಬರು ಸಾರ್ವಜನಿಕ ರ್ಯಾಲಿಯಲ್ಲಿ ಮಾಡಿದ್ದಾರೆ ಎನ್ನಲಾದ ಆಕ್ಷೇಪಾರ್ಹ ಹೇಳಿಕೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ಬೆನ್ನಲ್ಲೇ ಕಾಂಗ್ರೆಸ್ ಪಕ್ಷ ಪ್ರಧಾನಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ಪಕ್ಷದ ಮುಖಂಡ ಕಮಲ್ನಾಥ್ ಅವರು ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಅಪರಾಧಿಗಳನ್ನು ಕಣಕ್ಕೆ ಇಳಿಸುತ್ತೇವೆ ಎಂಬ ಯಾವುದೇ ಹೇಳಿಕೆ ನೀಡಿಲ್ಲ ಎಂದು ಆಯೋಗಕ್ಕೆ ಕಾಂಗ್ರೆಸ್ ಸ್ಪಷ್ಟಪಡಿಸಿದೆ.
ಚಿಂದ್ವಾರಾದಲ್ಲಿ ಸಾರ್ವಜನಿಕ ರ್ಯಾಲಿಯಲ್ಲಿ ಮಾತನಾಡಿದ ಮೋದಿ, "ಇತ್ತೀಚೆಗೆ ಸಮಾಜ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವೀಡಿಯೊವೊಂದರಲ್ಲಿ, ಹಿರಿಯ ಕಾಂಗ್ರೆಸ್ ಮುಖಂಡರೊಬ್ಬರು, ರಾಜ್ಯದಲ್ಲಿ ಚುನಾವಣೆ ಗೆಲ್ಲುವ ಸಲುವಾಗಿ ಗೂಂಡಾಗಳ ಮತ್ತು ಕಾನೂನು ಗೌರವಿಸದಿರುವವರ ಬೆಂಬಲ ಪಡೆಯಲೂ ಹಿಂಜರಿಯುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ" ಎಂದು ಉಲ್ಲೇಖಿಸಿದರು. ಇಂಥ ಕ್ರಮ ಸ್ವೀಕಾರಾರ್ಹವಲ್ಲ ಎಂದು ಮೋದಿ ಪ್ರತಿಪಾದಿಸಿದ್ದರು.