60 ಚೀನಿ ತಜ್ಞರಿಗೆ ಭಾರತ ಗೇಟ್ಪಾಸ್ ನೀಡಿದ್ದೇಕೆ?
ಮುಂಬೈ, ಡಿ,20: ಕೇಂದ್ರ ಸರ್ಕಾರದ ಮೇಕ್ ಇನ್ ಇಂಡಿಯಾ ಯೋಜನೆಯಡಿ ಮೊಬೈಲ್ ಫೋನ್ ಉತ್ಪಾದಿಸುತ್ತಿದ್ದ ಕಂಪನಿಯ ಡಮನ್ ಮತ್ತು ಸಿಲ್ವಸ್ಸಾ ಘಟಕಗಳಿಗೆ ಭೇಟಿ ನೀಡಿದ 60 ಚೀನಿ ತಜ್ಞರಿಗೆ ತಕ್ಷಣ ಭಾರತ ತೊರೆಯುವಂತೆ ವಿದೇಶೀಯರ ಪ್ರಾದೇಶಿಕ ನೋಂದಣಿ ಕಚೇರಿ (ಎಫ್ಆರ್ಆರ್ಓ) ನಿರ್ದೇಶನ ನೀಡಿದೆ.
ವ್ಯಾಪಾರ ವೀಸಾ ನೀತಿಯನ್ನು ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಸಾಬೀತಾದ ಹಿನ್ನೆಲೆಯಲ್ಲಿ ಈ ಸೂಚನೆ ನೀಡಲಾಗಿದ್ದು, ಎಫ್ಆರ್ಆರ್ಓ ನಿರ್ದೇಶನದ ಕ್ರಮಬದ್ಧತೆಯನ್ನು ಪ್ರಶ್ನಿಸಿ ಕಂಪನಿ ಇದೀಗ ಮುಂಬೈ ಹೈಕೋರ್ಟ್ನ ಮೆಟ್ಟಿಲೇರಿದೆ.
ನ್ಯಾಯಮೂರ್ತಿಗಳಾದ ಬಿ.ಪಿ.ಧರ್ಮಾಧಿಕಾರಿ ಮತ್ತು ಸಾರಂಗ್ ಕೋತ್ವಾಲ್ ಅವರನ್ನೊಳಗೊಂಡ ನ್ಯಾಯಪೀಠದ ಮುಂದೆ ಅರ್ಜಿ ಸಲ್ಲಿಸಿದ ಕಂಪನಿ ವಕೀಲ ನೌಶೆರ್ ಕೊಹ್ಲಿ, ಚೀನಿ ಪ್ರಜೆಗಳಿಗೆ ತಕ್ಷಣ ಭಾರತ ತೊರೆಯುವಂತೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಕ್ರಿಸ್ಮಸ್ ರಜೆಗೆ ಮುನ್ನ ತ್ವರಿತವಾಗಿ ಇದನ್ನು ವಿಚಾರಣೆ ನಡೆಸಬೇಕು ಎಂದು ಕೋರಿದರು. ಇವರ ವೀಸಾ ಅವಧಿ ಇನ್ನೂ ಇದ್ದರೂ ಕೆಲವರು ಈಗಾಗಲೇ ದೇಶ ಬಿಟ್ಟಿದ್ದಾರೆ ಎಂದು ಅವರು ಹೇಳಿದರು. ಪ್ರಕರಣದ ವಿಚಾರಣೆಯನ್ನು ಶುಕ್ರವಾರ ನಡೆಸಲು ನ್ಯಾಯಪೀಠ ನಿರ್ಧರಿಸಿತು.
ಪೆಸಿಫಿಕ್ ಸೈಬರ್ ಟೆಕ್ನಾಲಜಿ ಘಟಕಗಳಿಗೆ ವ್ಯಾಪಾರ ವೀಸಾದಡಿ 60 ಚೀನಿ ತಜ್ಞರು ಭೇಟಿ ನೀಡಿದ್ದು, ಇವರನ್ನು ಅಥವಾ ನಮ್ಮ ಕಂಪನಿ ಪ್ರತಿನಿಧಿಗಳ ವಿಚಾರಣೆಯನ್ನೂ ನಡೆಸದೇ ದೇಶ ತೊರೆಯುವಂತೆ ನೋಟಿಸ್ ನೀಡಲಾಗಿದೆ ಎಂದು ಕೊಹ್ಲಿ ವಾದಿಸಿದರು.
ಕಂಪನಿಯ ಜಂಟಿ ಸಹಭಾಗಿತ್ವದ ಪಾಲುದಾರ ಕಂಪನಿ, ಅದರ ಗ್ರಾಹಕರು ಮತ್ತು ಸರಬರಾಜುದಾರರನ್ನು ಈ ಘಟಕಕ್ಕೆ ಕಳುಹಿಸಿಕೊಟ್ಟಿತ್ತು. ಈ ಘಟಕಗಳು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ನವೀಕೃತ ವಿಶೇಷ ಉತ್ತೇಜಕ ಯೋಜನೆಯ ಫಲಾನುಭವಿ ಕಂಪನಿಯಾಗಿದ್ದು, ಈ ಘಟಕಗಳ ವಿನ್ಯಾಸ, ಅಭಿವೃದ್ಧಿ ಮತ್ತು ಮೊಬೈಲ್ ಫೋನ್ ಜೋಡಣೆಯು ಸರ್ಕಾರದ ಮೇಕ್ ಇಂಡಿಯಾ ಯೋಜನೆಗೆ ಅನುಸಾರವಾಗಿವೆ ಎಂದು ವಿವರಿಸಿದ್ದಾರೆ.
ಚೀನಿ ತಜ್ಞರು ಬಹುತೇಕ 180 ದಿನಗಳ ವ್ಯಾಪಾರ ವೀಸಾ ಅನ್ವಯ ಭಾರತಕ್ಕೆ ಆಗಮಿಸಿದ್ದರು. 2019ರ ಮೇ ತಿಂಗಳ ವರೆಗೂ ಕೆಲವರ ವೀಸಾ ಅವಧಿ ಇದೆ. ಆದರೆ ಡಿಸೆಂಬರ್ 15ರಂದು ಇವರಿಗೆ ದೇಶ ತೊರೆಯುವಂತೆ ಸೂಚಿಸಿ ನೋಟಿಸ್ ನೀಡಲಾಗಿದೆ.