ಆರರ ಪುತ್ರಿಯ ಅತ್ಯಾಚಾರ ಎಸಗಿ ಹತ್ಯೆಗೈದ ತಂದೆಗೆ ಮರಣದಂಡನೆ
ಭೋಪಾಲ್, ಡಿ.25: ಪತ್ನಿಯ ಶೀಲ ಶಂಕಿಸಿ, ತನ್ನ ಸ್ವಂತ ಪುತ್ರಿಯ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿದ್ದ ತಂದೆಯೊಬ್ಬನಿಗೆ ಇಲ್ಲಿನ ವಿಶೇಷ ನ್ಯಾಯಾಲಯ ಮರಣ ದಂಡನೆ ವಿಧಿಸಿದೆ.
42 ವರ್ಷದ ಈ ಆರೋಪಿ ತನ್ನ ಪತ್ನಿಯ ಶೀಲ ಶಂಕಿಸಿ, ಈ ಮಗು ತನ್ನದಲ್ಲ ಎಂಬ ನಿರ್ಧಾರಕ್ಕೆ ಬಂದು ಮಗುವಿನ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿದ್ದ ಎಂದು ಸರ್ಕಾರಿ ವಕೀಲರು ಹೇಳಿದ್ದಾರೆ. ಈ ಘಟನೆ 2017ರ ಮಾರ್ಚ್ 15ರಂದು ನಡೆದಿತ್ತು.
ಇದು ವಿರಳಾತಿವಿರಣ ಪ್ರಕರಣ ಎಂದು ಅಭಿಪ್ರಾಯಪಟ್ಟ ಪೊಕ್ಸೊ ವಿಶೇಷ ನ್ಯಾಯಾಧೀಶೆ ಕುಮುದಿನಿ ಪಟೇಲ್, ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿದ್ದಾರೆ. ಮಗುವಿನ ಮೇಲೆ ಅತ್ಯಾಚಾರ ಎಸಗಿ, ಅಸಹಜ ಲೈಂಗಿಕತೆಯಲ್ಲಿ ತೊಡಗಿ, ಆಕೆಯನ್ನು ಉಸಿರುಗಟ್ಟಿಸಿ ಕೊಂದದ್ದನ್ನು ಮರಣೋತ್ತರ ಪರೀಕ್ಷೆ ವರದಿ ದೃಢಪಡಿಸಿತ್ತು. ಸಂತ್ರಸ್ತೆಯ ಡಿಎನ್ಎ ಹಾಗೂ ಆರೋಪಿಯ ಡಿಎನ್ಎ ಹೋಲಿಕೆಯಾದ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಲಾಗಿತ್ತು.
ವೈಜ್ಞಾನಿಕ ಪುರಾವೆಗಳ ಆಧಾರದಲ್ಲಿ ಸರ್ಕಾರಿ ಅಭಿಯೋಜಕರು ವಾದಿಸಿದ್ದನ್ನು ಪುರಸ್ಕರಿಸಿದ ನ್ಯಾಯಾಧೀಶೆ, ಆರೋಪಿಗೆ ಭಾರತೀಯ ದಂಡಸಂಹಿತೆಯ ಸೆಕ್ಷನ್ 302 ಹಾಗೂ 376ರ ಅನ್ವಯ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. ಅಪ್ರಾಪ್ತ ವಯಸ್ಸಿನ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ ಆರೋಪಿಗಳಿಗೆ ಈ ವರ್ಷ ಗಲ್ಲು ಶಿಕ್ಷೆ ವಿಧಿಸಿದ 21ನೇ ಪ್ರಕರಣ ಇದಾಗಿದೆ.