ಮೆಡಿಕಲ್ ಶಾಪ್ನಲ್ಲಿ ಬಿಜೆಪಿ ಮುಖಂಡನ ಗುಂಡಿಕ್ಕಿ ಹತ್ಯೆ
ಪಾಟ್ನ, ಜ.10: ಬಿಹಾರದ ಮುಝಫರ್ಪುರ ಜಿಲ್ಲೆಯಲ್ಲಿ ಸ್ಥಳೀಯ ಬಿಜೆಪಿ ಮುಖಂಡನನ್ನು ಅಪರಿಚಿತ ದುಷ್ಕರ್ಮಿಯೊಬ್ಬ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಬಿಜೆಪಿ ಮುಖಂಡ ಬೈಜುಪ್ರಸಾದ್ ಗುಪ್ತ ಎಂಬವರು ತನ್ನ ಮೆಡಿಕಲ್ ಶಾಪ್ನಲ್ಲಿದ್ದಾಗ ಅಲ್ಲಿಗೆ ಬಂದ ಅಪರಿಚಿತ ವ್ಯಕ್ತಿಯೊಬ್ಬ ಕೆಲವು ಔಷಧಿಗಳ ಬಗ್ಗೆ ವಿಚಾರಿಸಿದ್ದು, ಬಳಿಕ ಗುಪ್ತ ಮೇಲೆ ಗುಂಡು ಹಾರಿಸಿದ್ದಾನೆ.
ಘಟನೆಯ ಕುರಿತು ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಗಂಭೀರ ಗಾಯಗೊಂಡಿದ್ದ ಗುಪ್ತರನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದು ಅದಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಘಟನೆಗೆ ಕಾರಣವೇನು ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ದುಷ್ಕರ್ಮಿಯ ಬಗ್ಗೆ ಕೆಲವು ಮಾಹಿತಿ ದೊರಕಿದ್ದು, ಆತನ ಬಂಧನಕ್ಕಾಗಿ ಕಾರ್ಯಾಚರಣೆ ನಡೆಸಲಿದ್ದೇವೆ. ಗುಪ್ತ ಈ ಪ್ರದೇಶದಲ್ಲಿ ಸಣ್ಣ ಮೆಡಿಕಲ್ ಶಾಪ್ ಒಂದನ್ನು ಹೊಂದಿದ್ದು ಗೃಹ ತಯಾರಿಕೆಯ ಕೆಲವು ಔಷಧಿಗಳನ್ನು ಸಮೀಪದ ನಿವಾಸಿಗಳಿಗೆ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.