ನದಿಯಲ್ಲಿ ದೋಣಿ ಮುಳುಗಿ 6 ಸಾವು: 36 ಜನರ ರಕ್ಷಣೆ
ನಂದುರ್ಬಾರ್, ಜ. 15: ಮಹಾರಾಷ್ಟ್ರದ ನಂದುರ್ಬಾರ್ ಜಿಲ್ಲೆಯ ನರ್ಮದಾ ನದಿಯಲ್ಲಿ ಮಂಗಳವಾರ ದೋಣಿ ಮಗುಚಿ ಕನಿಷ್ಠ 6 ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದುವರೆಗೆ ಒಟ್ಟು 36 ಮಂದಿಯನ್ನು ರಕ್ಷಿಸಲಾಗಿದೆ. ಅವರನ್ನು ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
60 ಮಂದಿ ಇದ್ದ ದೋಣಿ ಮಕರ ಸಂಕ್ರಾಂತಿ ಹಿನ್ನೆಲೆಯಲ್ಲಿ ನದಿ ಪೂಜೆಗೆ ತೆರಳುತ್ತಿದ್ದ ಸಂದರ್ಭ ಈ ದುರ್ಘಟನೆ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದುರಂತದಲ್ಲಿ ಮೃತಪಟ್ಟವರು ಮಹಾರಾಷ್ಟ್ರದ ಬುಡಕಟ್ಟು ಸಮುದಾಯ ಪ್ರಾಬಲ್ಯದ ಜಿಲ್ಲೆಯ ನದಿ ದಂಡೆಯಲ್ಲಿರುವ ಗ್ರಾಮಗಳ ಜನರು ಎಂದು ಪೊಲೀಸರು ತಿಳಿಸಿದ್ದಾರೆ.
ಸಾಮರ್ಥ್ಯಕ್ಕಿಂತ ಹೆಚ್ಚು ಜನರನ್ನು ಕೊಂಡೊಯ್ದಿರುವುದು ದೋಣಿ ಮಗುಚಲು ಕಾರಣ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story