ನೂತನ ಸಿಬಿಐ ವರಿಷ್ಠರ ನಿಯೋಜನೆ: ಜ. 24ರಂದು ಪ್ರಧಾನಿ ಮೋದಿ ನೇತೃತ್ವದ ಸಮಿತಿ ಸಭೆ
ಹೊಸದಿಲ್ಲಿ, ಜ. 16: ಸಿಬಿಐಗೆ ನೂತನ ನಿರ್ದೇಶಕರನ್ನು ನಿಯೋಜಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಯ್ಕೆ ಸಮಿತಿ ಜನವರಿ 24ರಂದು ಸಭೆ ನಡೆಸುವ ಸಾಧ್ಯತೆ ಇದೆ. ನರೇಂದ್ರ ಮೋದಿ ಅಲ್ಲದೆ ಸಮಿತಿಯಲ್ಲಿರುವ ಇತರ ಸದಸ್ಯರಾದ ಭಾರತದ ಮುಖ್ಯ ನ್ಯಾಯಮೂರ್ತಿ ಹಾಗೂ ಲೋಕಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಈ ಸಭೆಯಲ್ಲಿ ಭಾಗವಹಿಸುವರು.
ಜನವರಿ 21ರಂದು ಸಭೆ ನಡೆಸುವಂತೆ ಸರಕಾರ ಪ್ರಸ್ತಾಪ ಮಾಡಿತ್ತು. ಆದರೆ, ಖರ್ಗೆ ಅವರ ಮನವಿಯ ಹಿನ್ನೆಲೆಯಲ್ಲಿ ಸಭೆಯನ್ನು ಜನವರಿ 24ಕ್ಕೆ ನಿಗದಿಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ಉನ್ನತಾಧಿಕಾರದ ಸಮಿತಿ ಅಲೋಕ್ ಕುಮಾರ್ ವರ್ಮಾ ಅವರನ್ನು ಸಿಬಿಐ ನಿರ್ದೇಶಕರ ಹುದ್ದೆಯಿಂದ ಜನವರಿ 10ರಂದು ಪದಚ್ಯುತಿಗೊಳಿಸಲಾಗಿತ್ತು. ಅನಂತರ ಈ ಹುದ್ದೆ ಖಾಲಿ ಬಿದ್ದಿತ್ತು. ವರ್ಮಾ ಅವರ ಅವರ ಎರಡು ವರ್ಷಗಳ ಅಧಿಕಾರಾವಧಿ ಜನವರಿ 31ರಂದು ಅಂತ್ಯಗೊಳ್ಳಲಿದೆ.
Next Story