ಪುಲ್ವಾಮ ದಾಳಿ: ಪಾಕ್ ನತ್ತ ಬೊಟ್ಟು ಮಾಡಿದ ತನಿಖೆ
ಹೊಸದಿಲ್ಲಿ, ಫೆ. 19: 40 ಮಂದಿ ಸಿಆರ್ಪಿಎಫ್ ಯೋಧರನ್ನು ಬಲಿ ಪಡೆದ ಪುಲ್ವಾಮ ದಾಳಿಯಲ್ಲಿ ಆತ್ಮಹತ್ಯಾ ದಾಳಿಕೋರ ಬಳಸಿದ ಸ್ಫೋಟಕ ಮಿಲಿಟರಿ ಗ್ರೇಡ್ ಆರ್ಡಿಎಕ್ಸ್ ಆಗಿದ್ದು, ಪಾಕಿಸ್ತಾನದ ರಕ್ಷಣಾ ಪಡೆಗಳಿಂದ ಉಗ್ರರು ಇದನ್ನು ಪಡೆದಿದ್ದಾರೆ ಎಂಬ ಅಂಶ ಇದೀಗ ಬೆಳಕಿಗೆ ಬಂದಿದೆ.
ಸ್ಫೋಟಕಗಳಿಂದ ತುಂಬಿದ್ದ ವಾಹನ ಮಾರುತಿ ಇಕೊ ವ್ಯಾನ್ ಆಗಿತ್ತು ಎಂಬ ಬಗ್ಗೆಯೂ ಪುರಾವೆ ಸಿಕ್ಕಿದೆ ಎಂದು ವಿಧಿವಿಜ್ಞಾನ ತಜ್ಞರು ಹೇಳಿದ್ದಾರೆ.
ಗುರುವಾರದ ದಾಳಿ ಬಳಿಕ ಸ್ಥಳಕ್ಕೆ ಭೇಟಿ ನೀಡಿದ ವಿಧಿವಿಜ್ಞಾನ ವಿಭಾಗದ ತಜ್ಞರ ತಂಡ ತನ್ನ ಪ್ರಾಥಮಿಕ ವರದಿಯನ್ನು ಸಲ್ಲಿಸಿದ್ದು, ಈ ಆರ್ಡಿಎಕ್ಸ್ ತೀರಾ ಸ್ಥಿರ ಸ್ಫೋಟಕವಾಗಿದ್ದರೂ, ಕಾರು ಬಾಂಬಿನಲ್ಲಿ ಬಳಸಿದ ಇದನ್ನು ತಿಂಗಳುಗಳ ಹಿಂದೆ ಭಾರತಕ್ಕೆ ತರಲಾಗಿದೆ. ಇದನ್ನು ಭಾರತದಲ್ಲೇ ಜೋಡಿಸಲಾಗಿದೆ. ಅದು ಕೂಡಾ ಸ್ಫೋಟ ಸ್ಥಳದಿಂದ 5-7 ಕಿಲೋಮೀಟರ್ ವ್ಯಾಪ್ತಿಯಲ್ಲೇ ಇದನ್ನು ಜೋಡಿಸಲಾಗಿದೆ ಎಂದು ವರದಿಯಲ್ಲಿ ಹೇಳಿದೆ.
ದಾಳಿ ಬಳಿಕ ಸುರಿದ ಮಳೆಯಿಂದಾಗಿ ಪ್ರಮುಖ ಪುರಾವೆಗಳು ಕೊಚ್ಚಿಕೊಂಡು ಹೋಗಿದ್ದು, ವಿಧಿವಿಜ್ಞಾನ ವಿಭಾಗದ ಅಂತಿಮ ವರದಿ ನಿರೀಕ್ಷಿಸಲಾಗಿದೆ. ದಾಳಿಯಲ್ಲಿ ಸುಮಾರು 50-70 ಕೆಜಿ ಆರ್ಡಿಎಕ್ಸ್ ಬಳಸಲಾಗಿದೆ. 100-300 ಕೆಜಿ ಸ್ಫೋಟಕ ಬಳಸಿದ್ದರೆ ಇನ್ನಷ್ಟು ಹಾನಿ ಸಂಭವಿಸುತ್ತಿತ್ತು ಎಂದು ತಜ್ಞರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
"ಅಂತಿಮ ವರದಿಗೆ ಇನ್ನೂ ಕೆಲ ಕಾಲ ಬೇಕಾಗಬಹುದು. ಒಬ್ಬರಿಗಿಂತ ಹೆಚ್ಚು ಮಂದಿ ಸೂಕ್ತ ತರಬೇತಿ ಪಡೆದ ಬಾಂಬ್ ತಯಾರಕರು ಇದನ್ನು ಅಳವಡಿಸಲು ಭಾರತಕ್ಕೆ ನುಸುಳಿರುವ ಸಾಧ್ಯತೆ ಇದೆ. ಇದರ ಸ್ವಿಚ್, ಡೆಟೊನೇಟರ್ ಹಾಗೂ ಪವರ್ ಫ್ಯೂಸ್ಗಳನ್ನು ದಾಳಿಯ ವೇಳೆ ತೀರಾ ಸನಿಹದಲ್ಲೇ ಜೋಡಿಸಿರುವ ಸಾಧ್ಯತೆ ಇದೆ ಎಂದು ತಜ್ಞರೊಬ್ಬರು ವಿವರ ನೀಡಿದ್ದಾರೆ.
ಭಾರತದ ಸೇನೆ ಬಳಿ ಇರುವ ಪ್ರತಿ ಗ್ರಾಂ ಆರ್ಡಿಎಕ್ಸ್ ಅನ್ನು ಕೂಡಾ ಪರಿಶೋಧಿಸಲಾಗಿದೆ. ಆದರೆ ಪಾಕಿಸ್ತಾನ ಸೇನೆ ಉಗ್ರರ ಗುಂಪುಗಳಿಗೆ ಸ್ಫೋಟಕಗಳನ್ನು ಪೂರೈಸುವಲ್ಲಿ ಕುಖ್ಯಾತಿ ಪಡೆದಿದೆ ಎಂದು ಗುಪ್ತಚರ ಮೂಲಗಳು ಸ್ಪಷ್ಟಪಡಿಸಿವೆ.