ಮೋದಿಯನ್ನು ಟೀಕಿಸಿದ ಮಹಿಳೆಗೆ ವಿಎಚ್ ಪಿ, ಆರೆಸ್ಸೆಸ್ ಕಾರ್ಯಕರ್ತರಿಂದ ಅತ್ಯಾಚಾರ ಬೆದರಿಕೆ: ಆರೋಪ
ಹೊಸದಿಲ್ಲಿ, ಫೆ.20: ಪುಲ್ವಾಮ ದಾಳಿಗೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿಯನ್ನು ಟೀಕಿಸಿದ ಮಹಿಳೆಯೊಬ್ಬರಿಗೆ ಫೇಸ್ ಬುಕ್ ನಲ್ಲಿ ದುಷ್ಕರ್ಮಿಗಳು ಕೊಲೆ ಮತ್ತು ಅತ್ಯಾಚಾರದ ಬೆದರಿಕೆಯೊಡ್ಡಿದ್ದಾರೆ ಎಂದು ಆರೋಪಿಸಲಾಗಿದೆ. ವಿಎಚ್ ಪಿ ಮತ್ತು ಆರೆಸ್ಸೆಸ್ ಕಾರ್ಯಕರ್ತರು ಈ ಬೆದರಿಕೆಗಳನ್ನೊಡ್ಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ ಎಂದು indiatoday.in ವರದಿ ಮಾಡಿದೆ.
“ಸೈನಿಕರಿಗಾಗಿ ಕಣ್ಣೀರಿಡುತ್ತಿರುವ ವ್ಯಕ್ತಿಗಳಿಗೆ ಕಾಶ್ಮೀರಿ ನಾಗರಿಕರ ಬಗ್ಗೆಯೂ ಅದೇ ರೀತಿಯ ಭಾವನೆಗಳಿವೆಯೇ?, ಅವರು ಕಾಶ್ಮೀರಿಗಳೆಂಬ ಕಾರಣಕ್ಕೆ ಅವರನ್ನು ಹೊರಗಿಡಲಾಗುತ್ತಿದೆಯೇ?” ಎಂದು ಈ ಮಹಿಳೆ ಫೆಬ್ರವರಿ 15ರಂದು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದರು.
ಈ ಪೋಸ್ಟ್ ಹಾಕಿದ ನಂತರ ಸಾಮಾಜಿಕ ಜಾಲತಾಣದಲ್ಲಿ ನಿರಂತರ ದ್ವೇಷದ ಸಂದೇಶಗಳು ಮತ್ತು ಬೆದರಿಕೆಗಳನ್ನು ಎದುರಿಸುತ್ತಿದ್ದೇನೆ ಎಂದು 7 ವರ್ಷದ ಮಗುವಿನ ತಾಯಿಯಾಗಿರುವ ಮಹಿಳೆ ಹೇಳಿದ್ದಾರೆ ಎಂದು indiatoday.in ವರದಿ ಮಾಡಿದೆ.
“ನನಗೆ ನಿರಂತರವಾಗಿ ಬೆದರಿಕೆಗಳು ಬರುತ್ತಿವೆ. ವಿಎಚ್ ಪಿ/ಆರೆಸ್ಸೆಸ್ ಕಾರ್ಯಕರ್ತರಿಂದ ಹೆಚ್ಚಿನ ಬೆದರಿಕೆಗಳು ಬರುತ್ತಿವೆ. ನನ್ನ ಫೋಟೊಗಳನ್ನು ಹಲವು ಗ್ರೂಪ್ ಗಳಿಗೆ ಶೇರ್ ಮಾಡುವ ಮೂಲಕ ನನ್ನನ್ನು ಗುರಿ ಮಾಡಲು ಕರೆ ನೀಡುತ್ತಿದ್ದಾರೆ. ನನ್ನನ್ನು ಅವರು ಹಿಂಬಾಲಿಸುತ್ತಿದ್ದಾರೆ. ನನ್ನನ್ನು ಹುಡುಕುತ್ತಿದ್ದಾರೆ. ನಾನು ಈ ಪ್ರೊಫೈಲ್ ಗಳ ವಿರುದ್ಧ ಎಫ್ ಐಆರ್ ಗಳನ್ನು ದಾಖಲಿಸಿದ್ದೇನೆ. ಆದರೆ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ನನಗೆ ಹೆದರಿಕೆಯಾಗುತ್ತಿದೆ” ಎಂದವರು ಹೇಳಿದ್ದಾರೆ.