ಹೀಗೂ ಉಂಟೆ?: 2000ದ ನೋಟಿಗಾಗಿ ಮೆಟ್ರೋ ಹಳಿಗೆ ಹಾರಿದಳು!
ಹೊಸದಿಲ್ಲಿ, ಮಾ.13: ಹಳಿಯ ಮೇಲೆ ಬಿದ್ದ 2 ಸಾವಿರ ರೂಪಾಯಿಯ ನೋಟನ್ನು ಹೆಕ್ಕಲು ಹಳಿಗೆ ಹಾರಿದ 26 ವರ್ಷದ ಯುವತಿಯೊಬ್ಬರು ಮೆಟ್ರೋ ರೈಲಿನಡಿಗೆ ಬಿದ್ದರೂ ಪವಾಡಸದೃಶವಾಗಿ ಪಾರಾದ ಘಟನೆ ದ್ವಾರಕಾ ಮೋರ್ ಮೆಟ್ರೋ ನಿಲ್ದಾಣದಲ್ಲಿ ಮಂಗಳವಾರ ನಡೆದಿದೆ.
ಯುವತಿ ಹಳಿಗಳ ನಡುವೆ ಇರುವಾಗ ಮೆಟ್ರೋದ ಎರಡು ಕೋಚುಗಳು ಹಾದು ಹೋದವು. ರೈಲು ನಿಂತ ನಂತರ ಆಕೆ ಸುರಕ್ಷಿತವಾಗಿ ಎದ್ದು ಬಂದಿದ್ದಾಳೆ. ಸಿಐಎಸ್ಎಫ್ ಸಿಬ್ಬಂದಿ ಆಕೆಯನ್ನು ನಂತರ ವಶಕ್ಕೆ ಪಡೆದುಕೊಂಡರೂ ಲಿಖಿತವಾಗಿ ಕ್ಷಮೆ ಕೋರಿದ ನಂತರ ಆಕೆಯನ್ನು ಬಿಡುಗಡೆಗೊಳಿಸಲಾಯಿತು.
ಯುವತಿಯನ್ನು ಚೇತನಾ ಶರ್ಮ ಎಂದು ಗುರುತಿಸಲಾಗಿದೆ. ನೋಟು ಹೆಕ್ಕಲೆಂದು ಹಳಿಗೆ ಹಾರಿದಾಗ ಎದುರಿನಿಂದ ರೈಲು ಬರುತ್ತಿರುವುದ್ನು ಕಂಡು ಎರಡು ಹಳಿಗಳ ನಡುವೆ ಆಕೆ ಮುದುಡಿ ಮಲಗಿ ಬಿಟ್ಟಿದ್ದಳು. ಸುತ್ತಲಿನ ಜನ ಬೊಬ್ಬೆ ಹೊಡೆದ ನಂತರ ರೈಲು ಚಾಲಕ ರೈಲನ್ನು ನಿಲ್ಲಿಸಿದ್ದರು.
Next Story