ಯುವಕರು ಯುವತಿಯರನ್ನು ದುರುಗುಡುವುದು ಸಾಮಾನ್ಯ ಎಂದ ಸಂಸದ!
ಸತಾರಾ,ಮಾ.23: ಯುವಕರು ಯುವತಿಯರನ್ನು ದುರುಗುಟ್ಟಿ ನೋಡುವುದು ಸಾಮಾನ್ಯ ವಿಷಯ ಮತ್ತು ಅದರಲ್ಲೇನೂ ವಿಚಿತ್ರವಿಲ್ಲ ಎಂದು ಸಂಸದ ಮತ್ತು ಎನ್ಸಿಪಿ ನಾಯಕ ಉದಯನ್ರಾಜೆ ಭೋಂಸ್ಲೆ ಅಭಿಪ್ರಾಯಿಸಿದ್ದಾರೆ.
ಯುವಕರು ಯುವತಿಯರನ್ನು ನೋಡದಿದ್ದರೆ ಮತ್ತು ಯಾರನ್ನು ನೋಡಬೇಕು. ಹಾಗೆ ಮಾಡುವುದು ಸಾಮಾನ್ಯ ಎಂದು ಭೋಂಸ್ಲೆ ತಿಳಿಸಿದ್ದಾರೆ. ಶಾಲೆಯೊಂದರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ವಿದ್ಯಾರ್ಥಿನಿಯೊಬ್ಬಳು, “ನಾನು ಮನೆಯಿಂದ ಹೊರಗೆ ಹೋಗುವಾಗ ಯಾರಾದರೂ ನನ್ನನ್ನು ನಿರಂತರ ದುರುಗುಟ್ಟಿ ನೋಡುತ್ತಿದ್ದರೆ ಏನು ಮಾಡಬೇಕು” ಎಂದು ಕೇಳಿದಾಗ ಉತ್ತರಿಸಿದ ಸಂಸದ ಈ ರೀತಿಯಾಗಿ ಹೇಳಿದ್ದಾರೆ ಎಂದು ಸ್ಥಳೀಯ ಪತ್ರಿಕೆ ವರದಿ ಮಾಡಿದೆ.
ಸಂಸದರ ಮಾತಿಗೆ ಕೆಲವರು ಚಪ್ಪಾಳೆ ಬಾರಿಸಿದರೂ ಕೂಡಲೇ ತನ್ನ ತಪ್ಪಿನ ಅರಿವಾದವರಂತೆ ಕಂಡ ಭೋಂಸ್ಲೆ ತಮ್ಮ ಮಾತನ್ನು ಬದಲಾಯಿಸಿ, ಯಾರಾದರೂ ಹಾಗೆ ಮಾಡಿದರೆ ಅವರು ಶಿಕ್ಷೆಗೊಳಪಡಬೇಕಾಗುತ್ತದೆ ಎಂದು ಗದರಿಸಿದ್ದಾರೆ ಎಂದು ಪತ್ರಿಕೆ ವರದಿ ಮಾಡಿದೆ. ಯುವತಿಯರನ್ನು ನೋಡಬಹುದು ಎಂದ ಮಾತ್ರಕ್ಕೆ ಯುವಕರು ಏನೂ ಮಾಡಬಹುದು ಎಂದು ಅರ್ಥವಲ್ಲ. ಯಾರಾದರೂ ಹಾಗೆ ಮಾಡಿದರೆ ಅವರಿಗೆ ಶಿಕ್ಷೆ ನೀಡಬೇಕಾಗುತ್ತದೆ ಎಂದು ಸಂಸದರು ಎಚ್ಚರಿಕೆ ನೀಡಿದ್ದಾರೆ.