1100 ರೂ. ರಿಫಂಡ್ ಪಡೆಯಲು ಹೋಗಿ 75 ಸಾವಿರ ರೂ. ಕಳೆದುಕೊಂಡ ಮಹಿಳೆ!
ಆನ್ ಲೈನ್ ಶಾಪಿಂಗ್ ಮಾಡುವವರೇ ಎಚ್ಚರಿಕೆ
ಮುಂಬೈ, ಎ.1: ಆನ್ಲೈನ್ ಶಾಪಿಂಗ್ ಪೋರ್ಟಲ್ ನ ಗ್ರಾಹಕ ಸೇವಾ ಎಕ್ಸಿಕ್ಯೂಟಿವ್ ಗಳು ಎಂದು ಹೇಳಿಕೊಂಡ ವಂಚಕರು ಮಹಿಳೆಯೊಬ್ಬರಿಗೆ 75 ಸಾವಿರ ರೂಪಾಯಿ ಆನ್ಲೈನ್ ವಂಚನೆ ಮಾಡಿರುವ ಸಂಬಂಧ ಬೊರಿವಿಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪೊಲೀಸರು ಹೇಳುವ ಪ್ರಕಾರ ಮಹಿಳೆ 1100 ರೂಪಾಯಿ ಮೌಲ್ಯದ ಸೀರೆಯನ್ನು ಆನ್ ಲೈನ್ ಶಾಪಿಂಗ್ ಪೋರ್ಟಲ್ ಮೂಲಕ ಖರೀದಿಸಿದ್ದರು. ಆದರೆ ಅದರಲ್ಲಿ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಹಣ ಮರುಪಾವತಿ ಮಾಡುವಂತೆ ಕಂಪನಿಯ ಗ್ರಾಹಕ ಕಾಳಜಿ ಪ್ರತಿನಿಧಿಗೆ ಮನವಿ ಮಾಡಿದರು. ದೂರವಾಣಿ ಮೂಲಕ ಮಹಿಳೆಯ ಬ್ಯಾಂಕ್ ಖಾತೆ ಸಂಖ್ಯೆ ಹಾಗೂ ಐಎಫ್ಎಸ್ಸಿ ಕೋಡ್ ಕೇಳಲಾಗಿತ್ತು. ಮಾರ್ಚ್ 25ರಂದು ಮಹಿಳೆಗೆ ಬ್ಯಾಂಕ್ ಶಾಖೆಯಿಂದ ಬಂದ ಎಸ್ಸೆಮ್ಮೆಸ್ ನಲ್ಲಿ, ಅವರ ಖಾತೆಯಿಂದ 75 ಸಾವಿರ ರೂಪಾಯಿ ಹಣ ಪಡೆದಿರುವುದು ತಿಳಿದುಬಂತು.
ಎಟಿಎಂ ಮೂಲಕ ಹಣ ಪಡೆಯಲಾಗಿದೆ ಎಂದು ಬ್ಯಾಂಕ್ ಹೇಳಿದೆ. ಅಂದರೆ ವಂಚಕರು ಡೆಬಿಟ್ ಕಾರ್ಡ್ ಕ್ಲೋನ್ ಮಾಡಿ ಹಣ ಪಡೆದಿದ್ದಾರೆ ಎಂದು ದೂರುದಾರರು ಹೇಳಿದ್ದಾರೆ.
Next Story