"56 ಇಂಚಿನ ಎದೆ ಕತ್ತೆಗಳಿಗೆ ಮಾತ್ರ ಇರಲು ಸಾಧ್ಯ"
ಅರ್ಜುನ್ ಮೋದ್ವಾಡಿಯಾ ಟೀಕೆಗೆ ಬಿಜೆಪಿ ಗರಂ
ಅಹ್ಮದಾಬಾದ್, ಎ.10: ಐವತ್ತಾರು ಇಂಚಿನ ಎದೆ ಕೇವಲ ಕತ್ತೆಗಳಿಗೆ ಮಾತ್ರ ಇರಲು ಸಾಧ್ಯ ಎಂದು ಗುಜರಾತ್ ಕಾಂಗ್ರೆಸ್ನ ಮಾಜಿ ಅಧ್ಯಕ್ಷ ಅರ್ಜುನ್ ಮೋದ್ವಾಡಿಯಾ, ಪ್ರಧಾನಿ ನರೇಂದ್ರ ಮೋದಿಯವರನ್ನು ಅಣಕಿಸಿರುವುದನ್ನು ರಾಜ್ಯ ಬಿಜೆಪಿ ತೀವ್ರವಾಗಿ ಖಂಡಿಸಿದೆ.
ಬನಸ್ಕಂದ ಜಿಲ್ಲೆಯ ದೀಸಾದಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅರ್ಜುನ್, ಪ್ರಧಾನಿಯವರನ್ನು ಹೀಗೆ ಅಣಕಿಸಿದರು. "56 ಇಂಚಿನ ಎದೆ ಹೊಂದಿರುವ ನನ್ನಂಥವರು ಮಾತ್ರ ದಿಟ್ಟ ನಿರ್ಧಾರ ಕೈಗೊಳ್ಳಲು ಸಾಧ್ಯ" ಎಂದು 2014ರ ಚುನಾವಣೆ ವೇಳೆ ನರೇಂದ್ರ ಮೋದಿ ಹೇಳಿಕೊಂಡಿದ್ದನ್ನು ಇದೀಗ ಮತ್ತೆ ಮೋದ್ವಾಡಿಯಾ ಕೆದಕಿದ್ದಾರೆ.
"ಒಬ್ಬ ಕಟ್ಟುಮಸ್ತಾದ ವ್ಯಕ್ತಿ 36 ಇಂಚು ಎದೆ ಹೊಂದಿರಬಹುದು. ಬಾಡಿಬಿಲ್ಡರ್ ಎದೆ 42 ಇಂಚುವರೆಗೂ ಇರಬಹುದು. ಆದರೆ 56 ಇಂಚು ಎದೆ ಇರುವುದು ಕತ್ತೆಗಳಿಗೆ. ಎತ್ತುಗಳಿಗೆ 100 ಇಂಚಿನ ಎದೆ ಇರುತ್ತದೆ" ಎಂದು ಲೇವಡಿ ಮಾಡಿದರು.
ಮೋದಿ ಭಕ್ತರಿಗೆ ಇದು ಅರ್ಥವಾಗದೇ, ನಿಮ್ಮ ನಾಯಕನಿಗೆ 56 ಇಂಚಿನ ಎದೆ ಇದೆ ಎಂದು ಹೇಳಿದಾಗ ಸಂಭ್ರಮಿಸುತ್ತಾರೆ ಎಂದು ವ್ಯಂಗ್ಯವಾಡಿದರು. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಾಜೀವ್ ಸತವ್ ಮತ್ತು ಪಕ್ಷದ ಅಭ್ಯರ್ಥಿ ಪಾರ್ಥಿ ಭತೋಲ್ ಕೂಡಾ ರ್ಯಾಲಿಯಲ್ಲಿ ಉಪಸ್ಥಿತರಿದ್ದರು.
ಈ ಹೇಳಿಕೆಯನ್ನು ಬಿಜೆಪಿ ಖಂಡಿಸಿದೆ. "ಸೋಲಿನ ಕಾರಣದಿಂದ ಕಾಂಗ್ರೆಸ್ ಪಕ್ಷ ಮಾನಸಿಕ ಸಮತೋಲನ ಕಳೆದುಕೊಂಡಿದೆ. ಈ ಮಾತುಗಳು ಅಸಮರ್ಪಕ; ಆಘಾತಕಾರಿ ಮತ್ತು ಖಂಡನೀಯ" ಎಂದು ಬಿಜೆಪಿ ವಕ್ತಾರ ಭರತ್ ಪಾಂಡ್ಯ ಹೇಳಿದ್ದಾರೆ.