ಪಿಎಂ ಮೋದಿ ಸಿನೆಮ ವೀಕ್ಷಿಸಿ ಅಭಿಪ್ರಾಯ ತಿಳಿಸುವಂತೆ ಆಯೋಗಕ್ಕೆ ಸುಪ್ರೀಂ ಸೂಚನೆ
ಹೊಸದಿಲ್ಲಿ, ಎ.15: ಪ್ರಧಾನಮಂತ್ರಿ ನರೇಂದ್ರ ಮೋದಿಯ ಜೀವನಾಧಾರಿತ ಸಿನೆಮ ವನ್ನು ಸಂಪೂರ್ಣ ವೀಕ್ಷಿಸಿದ ಬಳಿಕ ಸಿನೆಮದ ಬಿಡುಗಡೆಗೆ ನಿಷೇಧ ಹೇರುವ ಬಗ್ಗೆ ಅಭಿಪ್ರಾಯವನ್ನು ಸೀಲ್ ಮಾಡಿದ ಲಕೋಟೆಯಲ್ಲಿಟ್ಟು ಎಪ್ರಿಲ್ 19ರ ಒಳಗೆ ಸಲ್ಲಿಸುವಂತೆ ಸುಪ್ರೀಂಕೋರ್ಟ್ ಚುನಾವಣಾ ಆಯೋಗಕ್ಕೆ ಸೂಚಿಸಿದೆ.
ಬಳಿಕ ಈ ಬಗ್ಗೆ ಎಪ್ರಿಲ್ 22ರಂದು ವಿಚಾರಣೆ ನಡೆಸುವುದಾಗಿ ಮುಖ್ಯ ನ್ಯಾಯಾಧೀಶ ರಂಜನ್ ಗೊಗೊಯಿ ನೇತೃತ್ವದ ನ್ಯಾಯಪೀಠ ಚುನಾವಣಾ ಆಯೋಗಕ್ಕೆ ತಿಳಿಸಿತು. ಚುನಾವಣಾ ಆಯೋಗವು ಚಿತ್ರದ ಬಿಡುಗಡೆ ನಿಷೇಧಿಸಿರುವುದನ್ನು ಪ್ರಶ್ನಿಸಿ ಸಿನೆಮದ ನಿರ್ಮಾಪಕರು ಸುಪ್ರೀಂಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಚುನಾವಣಾ ಆಯೋಗ ಸಿನೆಮವನ್ನು ಪೂರ್ತಿಯಾಗಿ ನೋಡಿಲ್ಲ, ಕೇವಲ ಪ್ರೋಮೊ ನೋಡಿ ನಿರ್ಧಾರಕ್ಕೆ ಬಂದಿದೆ ಎಂದು ನಿರ್ಮಾಪಕರ ಪರ ವಕೀಲ ಮುಕುಲ್ ರೋಹಟ್ಗಿ ನ್ಯಾಯಪೀಠಕ್ಕೆ ತಿಳಿಸಿದರು.
ಆಯೋಗದವರ ಅಥವಾ ಸಮಿತಿಯ ವೀಕ್ಷಣೆಗಾಗಿಯೇ ಸಿನೆಮದ ವಿಶೇಷ ಪ್ರದರ್ಶನಕ್ಕೆ ವ್ಯವಸ್ಥೆ ಮಾಡುವುದಾಗಿ ನಿರ್ಮಾಪಕರು ತಿಳಿಸಿದರು. ಸಿನೆಮದ ಬಿಡುಗಡೆಗೆ ಕೆಲವೇ ಗಂಟೆ ಇರುವಾಗ ಸಿನೆಮ ಬಿಡುಗಡೆಗೆ ತಡೆಯಾಜ್ಞೆ ವಿಧಿಸಿದ ನೋಟಿಸ್ ಬಂದಿದೆ. ನೋಟಿಸನ್ನು ನೋಡಿ ತನಗೆ ಆಘಾತವಾಯಿತು. ಕೇವಲ ಪ್ರೋಮೊ ನೋಡಿ ಸಿನೆಮವನ್ನು ನಿಷೇಧಿಸುವುದು ಸರಿಯಲ್ಲ. ಪೂರ್ತಿ ಸಿನೆಮ ನೋಡಿ ಬಳಿಕ ನಿರ್ಧಾರ ಕೈಗೊಳ್ಳಬೇಕು ಎಂಬ ಮನವಿಯೊಂದಿಗೆ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿರುವುದಾಗಿ ಸಿನೆಮದ ನಿರ್ಮಾಪಕ ಸಂದೀಪ್ ಸಿಂಗ್ ಹೇಳಿದ್ದಾರೆ.